ವಿಜಯಸಾಕ್ಷಿ ಸುದ್ದಿ, ಗದಗ: ಅಧಿಕ ಮಳೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಗದಗ ನಗರದ ಗಂಗಿಮಡಿ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸೋಮವಾರ ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಸ್ಥಳದಲ್ಲೇ ಅಧಿಕಾರಿಗಳಿಂದ ಮಾಹಿತಿ ಪಡೆದು ತುರ್ತು ನೆರವು ಹಾಗೂ ಶಾಶ್ವತ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಸಂತ್ರಸ್ತರೊಂದಿಗೆ ನೇರವಾಗಿ ಮಾತನಾಡಿದ ಸಚಿವರು, “ನಿಮ್ಮ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕನ ಮಾಡಿದ್ದೇನೆ. ಸಂಕಷ್ಟದಲ್ಲಿರುವ ಜನರ ನೆರವಿಗೆ ಸರ್ಕಾರ ಸದಾ ಬದ್ಧವಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ” ಎಂದು ಧೈರ್ಯ ತುಂಬಿದರು.
ಗಂಗಿಮಡಿ ಪ್ರದೇಶದಲ್ಲಿ ಒಟ್ಟು 96 ಕುಟುಂಬಗಳು ತಗಡಿನ ಶೇಡ್‌ಗಳಲ್ಲಿ ಜೀವನ ಸಾಗಿಸುತ್ತಿದ್ದು, ಭಾರೀ ಮಳೆಯಿಂದ 9 ಶೇಡ್‌ಗಳು ಸಂಪೂರ್ಣ ಕುಸಿದಿವೆ. ಈಗಾಗಲೇ ಜಿಲ್ಲಾಡಳಿತದಿಂದ 88 ಕುಟುಂಬಗಳಿಗೆ ತಲಾ ₹5 ಸಾವಿರ ನೆರವು ವಿತರಿಸಲಾಗಿದ್ದು, ಉಳಿದವರಿಗೆ ಶೀಘ್ರವೇ ಸಹಾಯಧನ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಕೆಲವರು ಮನೆಗಳಿದ್ದರೂ ಶೇಡ್‌ಗಳಲ್ಲಿ ವಾಸಿಸುತ್ತಿರುವ ಮಾಹಿತಿ ಗಮನಕ್ಕೆ ಬಂದಿದೆ. ಅರ್ಹರನ್ನು ಗುರುತಿಸಿ ಮೊದಲ ಹಂತದಲ್ಲಿ ನಿರ್ಮಾಣವಾಗುತ್ತಿರುವ 1000 ಮನೆಗಳಲ್ಲಿ ನಿಜವಾದ ಸಂತ್ರಸ್ತರಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
“₹5 ಸಾವಿರ ಸಾಲದು” – ಸಂತ್ರಸ್ತರ ಮನವಿ
ಸಂಪೂರ್ಣ ಹಾನಿಗೊಳಗಾದ 9 ಕುಟುಂಬಗಳು, “₹5 ಸಾವಿರ ನೆರವು ಸಾಕಾಗುವುದಿಲ್ಲ. ಕನಿಷ್ಠ ₹20 ಸಾವಿರ ಸಹಾಯಧನ ನೀಡಬೇಕು” ಎಂದು ಸಚಿವರ ಮುಂದೆ ಮನವಿ ಮಾಡಿದರು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಪ್ರಸ್ತುತ ಸಂತ್ರಸ್ತರು ಶಾಲಾ ಕೊಠಡಿಗಳಲ್ಲಿ ಆಶ್ರಯ ಪಡೆದಿದ್ದು, ಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಜಿಲ್ಲಾಧಿಕಾರಿಗಳು ಈಗಾಗಲೇ ಆಹಾರ, ಆರೋಗ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದಾರೆ. 96 ಕುಟುಂಬಗಳಲ್ಲಿ ಯಾರಿಗೆ ಮನೆ ಇದೆ, ಯಾರಿಗೆ ಇಲ್ಲ ಎಂಬುದರ ಸಮಗ್ರ ಪರಿಶೀಲನೆ ನಡೆಸಿ, ನಗರಸಭೆ ನಿಯಮಾವಳಿಗಳ ಅನ್ವಯ ಅರ್ಹರಿಗೆ ಮನೆ ಮಂಜೂರು ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕರು, ಸಚಿವರ ಮುಂದೆ ಮಂಜೂರಾದ ಮನೆಗಳ ಮರುಸರ್ವೇ ನಡೆಸಬೇಕು, ಮನೆ ಪಡೆದು ಬಾಡಿಗೆಗೆ ನೀಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಶಾಶ್ವತ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕು, ಸೋಲಾರ್ ಲೈಟ್ ಅಳವಡಿಸಬೇಕು, ಮೂಲಭೂತ ಸೌಲಭ್ಯ ಒದಗಿಸಬೇಕು,
ಮನೆ ಸಿಗುವವರೆಗೆ ಇಲ್ಲಿಯೇ ವಾಸಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ, ತಾಲ್ಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ಕೆಡಿಪಿ ಸಮಿತಿ ಸದಸ್ಯ ಎಸ್.ಎನ್. ಬಳ್ಳಾರಿ, ನೀಲವ್ವ ಬೋಳನವರ, ಸಿದ್ದು ಪಾಟೀಲ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ತಹಸೀಲ್ದಾರ್ ಶ್ರೀನಿವಾಸಮೂರ್ತಿ, ಡಾ. ಎಸ್.ಎಸ್. ನೀಲಗುಂದ, ಆರ್.ಎಸ್. ಬುರಡಿ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
“ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಅರ್ಹರಿಗೆ ಮನೆ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು.”ಎಚ್.ಕೆ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ“ನಮ್ಮ ಅಳಲಿಗೆ ಸ್ಪಂದಿಸಿ ಸಚಿವರು ಸ್ಥಳಕ್ಕೆ ಬಂದು ಪರಿಶೀಲಿಸಿರುವುದು ನಮಗೆ ಧೈರ್ಯ ತಂದಿದೆ.”ಗಂಗಿಮಡಿ ನಿವಾಸಿಗಳು



