ಹಗರಿಬೊಮ್ಮನಹಳ್ಳಿ: ತಾಲೂಕಿನಾದ್ಯಂತ ಸುರಿದ ವರ್ಷದ ಮೊದಲ ಭಾರೀ ಮಳೆಯಿಂದ ಹಗರಿಬೊಮ್ಮನಹಳ್ಳಿ ತಾಲೂಕಿನ ಜೀವನಾಡಿಯಾಗಿರುವ ಮಾಲವಿ ಜಲಾಶಯಕ್ಕೆ ಹೊಸ ಜೀವಕಳೆ ಬಂದಿದೆ. ಜಲಾಶಯದತ್ತ ಮಳೆ ನೀರು ಹರಿದು ಬರುತ್ತಿರುವ ದೃಶ್ಯ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.
ಬೇಸಿಗೆಯ ತೀವ್ರ ಬಿಸಿಲಿನಿಂದ ನೀರಿನ ಮಟ್ಟ ಕುಸಿದಿದ್ದ ಜಲಾಶಯ, ಮೊದಲ ಮಳೆಯಲ್ಲೇ ಮತ್ತೆ ಚೇತರಿಕೆ ಕಾಣತೊಡಗಿದೆ. ಮಳೆಯ ಆಗಮನದಿಂದ ತಾಲೂಕಿನ ಜನರು ಹಾಗೂ ರೈತರು ಸಂತಸಗೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆತಂತಾಗಿದೆ.
ಇತ್ತೀಚೆಗೆ ಜಲಾಶಯದಲ್ಲಿ ಹೊಸ ಗೇಟ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು, ಈ ಮಳೆಯೊಂದಿಗೆ ಅದರ ಉಪಯೋಗ ಸ್ಪಷ್ಟವಾಗತೊಡಗಿದೆ. ಹೊಸ ಗೇಟ್‌ನಿಂದ ನೀರಿನ ಸಂಗ್ರಹಣೆ ಹಾಗೂ ನಿರ್ವಹಣೆ ಸುಧಾರಣೆಯಾಗಲಿದ್ದು, ಮುಂದಿನ ದಿನಗಳಲ್ಲಿ ಕೃಷಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
ಮಾಲವಿ ಜಲಾಶಯ ತಾಲೂಕಿಗೆ ಕುಡಿಯುವ ನೀರು ಹಾಗೂ ನೀರಾವರಿ ವ್ಯವಸ್ಥೆಯ ಪ್ರಮುಖ ಆಧಾರವಾಗಿದ್ದು, ಮೊದಲ ಮಳೆಯಲ್ಲೇ ಜಲಾಶಯಕ್ಕೆ ನೀರು ಹರಿದು ಬಂದಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.



