ಮೈಸೂರು: ಬಾಲಿವುಡ್ ನಟ ರಣ್ವೀರ್ ಸಿಂಗ್ ಸುತ್ತ ವಿವಾದಗಳು ಹೆಚ್ಚಾಗುತ್ತಿರುವ ಮಧ್ಯೆಯೇ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ಘಟನೆ ಗಮನ ಸೆಳೆದಿದೆ. ಇತ್ತೀಚಿನ ಬ್ಯಾನ್ ನಿರ್ಧಾರದ ಬೆನ್ನಲ್ಲೇ ಅವರು ಚಾಮುಂಡಿ ದೇವಾಲಯಕ್ಕೆ ಆಗಮಿಸಿರುವುದು ಚರ್ಚೆಗೆ ಕಾರಣವಾಗಿದೆ.
ಕೆಲ ತಿಂಗಳ ಹಿಂದೆ ಗೋವಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಣ್ವೀರ್ ಸಿಂಗ್ ದೈವವನ್ನು ಅನುಕರಣೆ ಮಾಡಿದ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ರಿಷಬ್ ಶೆಟ್ಟಿ ಜೊತೆಗಿನ ಆ ವೇದಿಕೆಯಲ್ಲಿ ನಡೆದ ಘಟನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ನಂತರ ಅವರು ಕ್ಷಮೆ ಕೇಳಿದ್ದರೂ, ಪ್ರಕರಣ ಹೈಕೋರ್ಟ್ ವರೆಗೆ ತಲುಪಿತ್ತು.
ಹೈಕೋರ್ಟ್ ಈ ಸಂಬಂಧ ಚಾಮುಂಡಿ ದೇವಸ್ಥಾನದಲ್ಲಿ ಕ್ಷಮೆ ಕೇಳುವಂತೆ ಸೂಚನೆ ನೀಡಿದ್ದರೂ, ಅದನ್ನು ಅವರು ತಕ್ಷಣ ಪಾಲಿಸಿರಲಿಲ್ಲ ಎಂದು ವರದಿಯಾಗಿದೆ. ಇದೀಗ ವೃತ್ತಿಜೀವನದಲ್ಲಿ ಎದುರಾಗಿರುವ ಹಿನ್ನಡೆಗಳ ನಡುವೆಯೇ ರಣ್ವೀರ್ ಸಿಂಗ್ ಮೈಸೂರಿಗೆ ಭೇಟಿ ನೀಡಿದ್ದಾರೆ.
ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವಿಯ ಮುಂದೆ ಕ್ಷಮೆ ಯಾಚಿಸಿರುವ ರಣ್ವೀರ್ ಸಿಂಗ್, ಕೆಲ ಹರಕೆಗಳನ್ನು ಕೂಡ ಹೊತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರ ಭೇಟಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.



