ಬೆಂಗಳೂರು: ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದ್ದು, ಕರ್ನಾಟಕದಲ್ಲಿ ಸರ್ಕಾರವೇ ಇಲ್ಲದಂತಾಗಿದೆ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವಿನ ನಾಯಕತ್ವ ಚರ್ಚೆ ದೆಹಲಿಗೆ ಶಿಫ್ಟ್ ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿನ್ನೆಯಿಂದ ಕರ್ನಾಟಕ ಸರ್ಕಾರವೇ ದೆಹಲಿಗೆ ಸ್ಥಳಾಂತರವಾಗಿದೆ. ರಾಜ್ಯ ಸರ್ಕಾರ ದೆಹಲಿಯಿಂದ ಕಾರ್ಯನಿರ್ವಹಿಸುವ ದುಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾಗುತ್ತಾ ಬಂದಿದೆ. ಆದರೆ ಅಭಿವೃದ್ಧಿ ವಿಚಾರ ಬಿಟ್ಟು ಯಾರು ಮುಖ್ಯಮಂತ್ರಿ ಆಗಬೇಕು, ಯಾವಾಗ ಆಗಬೇಕು ಎಂಬ ಅಧಿಕಾರದ ಕಿತ್ತಾಟದಲ್ಲೇ ನಾಯಕರು ತೊಡಗಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ರಾಜ್ಯ ಸರ್ಕಾರ ಜನರ ಮೇಲೆ ತೆರಿಗೆ ಭಾರ ಹಾಕಿ ಸುಲಿಗೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವುದಕ್ಕಿಂತ ಅಧಿಕಾರದ ಹೋರಾಟಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತಿದೆ ಎಂದರು.
ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದ ಅರಗ ಜ್ಞಾನೇಂದ್ರ, ಪೊಲೀಸರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ದಾಖಲಿಸಿದ್ದ ಪ್ರಕರಣಗಳನ್ನೇ ಸರ್ಕಾರ ವಾಪಸ್ ಪಡೆಯುತ್ತಿದೆ. ನಾನು ಗೃಹ ಸಚಿವನಾಗಿದ್ದಾಗ ದಾಖಲಿಸಿದ್ದ ಪ್ರಕರಣಗಳನ್ನೂ ಈಗ ಹಿಂಪಡೆಯಲಾಗಿದೆ ಎಂದು ಹೇಳಿದರು.
ಸ್ಪೀಕರ್ ಪತ್ರ ಕೊಟ್ಟಿದ್ದಾರೆ ಎಂಬ ಕಾರಣ ಹೇಳಿ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ. ಇದು ಅತ್ಯಂತ ದುರಂತಕರ ಬೆಳವಣಿಗೆ ಎಂದು ಟೀಕಿಸಿದರು.
ಮುಸ್ಲಿಮರ ತುಷ್ಟೀಕರಣ ರಾಜಕಾರಣವೇ ಸರ್ಕಾರದ ಪ್ರಮುಖ ಅಜೆಂಡಾ ಆಗಿದೆ ಎಂದು ಆರೋಪಿಸಿದ ಅವರು, ಭಟ್ಕಳದಲ್ಲಿ ನಡೆದ ಘಟನೆಗಳು ಅದರ ಪರಿಣಾಮ. ಮತ್ತೆ ಪೊಲೀಸರ ಮೇಲೆಯೇ ಹಲ್ಲೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗುಡುಗಿದರು.



