HomeGadag Newsಬಸವಾದಿ ಶರಣರ ಹೆಸರಲ್ಲಿ ಹಿಂದೂ ಸಮಾವೇಶ ಯಾಕೆ?

ಬಸವಾದಿ ಶರಣರ ಹೆಸರಲ್ಲಿ ಹಿಂದೂ ಸಮಾವೇಶ ಯಾಕೆ?

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಮಾನತೆ ಮತ್ತು ಜಾತಿ ವಿರೋಧದ ತತ್ವ ಸಾರಿದ ಬಸವಾದಿ ಶರಣರ ಹೆಸರಿನಲ್ಲಿ ‘ಹಿಂದೂ ಸಮಾವೇಶ’ ನಡೆಸುತ್ತಿರುವುದು ಖೇದಕರವಾಗಿದ್ದು, ಮೇ 31ರಂದು ಗದಗದಲ್ಲಿ ನಡೆಯಲಿರುವ ಸಮಾವೇಶಕ್ಕೆ ಆಗಮಿಸುತ್ತಿರುವ ಕನ್ಹೇರಿ ಮಠದ ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿಗಳಿಗೆ ಜಿಲ್ಲಾಡಳಿತ ಗದಗ ಪ್ರವೇಶ ನಿರ್ಬಂಧಿಸಿ ಶಾಂತಿ ಕಾಪಾಡಬೇಕು ಎಂದು ಸಾಹಿತಿ ಬಸವರಾಜ ಸೂಳಿಬಾವಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಾದಿ ಶರಣರು ಸಮಾನತೆಗಾಗಿ ಹಿಂದುತ್ವದ ಜಾತಿ ವ್ಯವಸ್ಥೆಗೆ ವಿರುದ್ಧವಾಗಿ ಹೋರಾಡಿದವರು. ಅಂತಹ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ನಡೆಸುವುದು ಶರಣ ಚಿಂತನೆಗೆ ವಿರುದ್ಧವಾಗಿದೆ ಎಂದು ಟೀಕಿಸಿದರು.
“ಈ ಸಮಾವೇಶ ರೈತರಿಗೆ ಸಲಹೆ ನೀಡಲು ಎಂದಾದರೆ ಅದನ್ನು ‘ರೈತ ಹಿಂದೂ ಸಮಾವೇಶ’ ಎಂದು ಕರೆಯಬಹುದಿತ್ತು. ಹಿಂದುತ್ವಕ್ಕೂ ಬಸವಾದಿ ಶರಣರಿಗೂ ಯಾವುದೇ ಸಂಬಂಧವಿಲ್ಲ. ಹಿಂದುತ್ವಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡದ್ದೇ ಲಿಂಗಾಯತ ಧರ್ಮ,” ಎಂದು ಹೇಳಿದರು.
ಜಾತಿ ವ್ಯವಸ್ಥೆಯನ್ನು ಒಪ್ಪದ ಶರಣ ಚಳವಳಿಯನ್ನು ಹಿಂದುತ್ವದ ಚೌಕಟ್ಟಿಗೆ ಸೇರಿಸಲು ಕೆಲವರು ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ. ಈ ಸಮಾವೇಶ ಲಿಂಗಾಯತ ಧರ್ಮ ಹಾಗೂ ಸಂವಿಧಾನದ ಮೌಲ್ಯಗಳ ಮೇಲಿನ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಾವೆಲ್ಲ ಹಿಂದೂ-ನಾವೆಲ್ಲ ಒಂದು” ಎಂಬ ಘೋಷಣೆ ನೀಡುವವರೊಂದಿಗೆ ಕಾಣಿಸಿಕೊಳ್ಳುತ್ತಿರುವ ಕನ್ಹೇರಿ ಮಠದ ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ ಸಮಾನತೆ ಸಾಧ್ಯವಿಲ್ಲ ಎನ್ನುವ ನಿಲುವು ವ್ಯಕ್ತಪಡಿಸುತ್ತಿದ್ದಾರೆ. ಅವರು ಮಠಾಧೀಶರಂತೆ ಅಲ್ಲ, ವಿಶ್ವ ಹಿಂದೂ ಪರಿಷತ್ ಪ್ರತಿನಿಧಿಯಂತೆ ಮಾತನಾಡುತ್ತಿದ್ದಾರೆ. ಹೀಗಾಗಿ ಪೀಠ ತ್ಯಜಿಸಿ ಅದರ ಪ್ರಚಾರಕರಾಗಲಿ,” ಎಂದು ಸವಾಲು ಹಾಕಿದರು.
ಬಸವ ಅನುಯಾಯಿ ಅಶೋಕ ಬರಗುಂಡಿ ಮಾತನಾಡಿ, ಬಸವಾದಿ ಶರಣರು ವೈದಿಕ ವ್ಯವಸ್ಥೆಯ ವಿರುದ್ಧ ಹೋರಾಡಿದವರು. ಅಂತಹ ಶರಣರ ಹೆಸರಿನಲ್ಲಿ ನಡೆಯುವ ಈ ಸಮಾವೇಶ ವಚನ ಚಳವಳಿಯ ಹಿಂದೂಕರಣದ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಶೇಖಣ್ಣ ಕವಳಿಕಾಯಿ, ಪ್ರೊ. ಡಿ.ಜಿ. ಜೋಗಣ್ಣವರ, ಗಿರಿಜಾ ಹಸಬಿ, ನಿವೃತ್ತ ಶಿಕ್ಷಕ ಡಿಎಸ್‌ಎಸ್‌ನ ಎಸ್.ಎನ್. ಬಳ್ಳಾರಿ, ಕರಿಗೌಡರ, ಪ್ರಕಾಶ ಅಸುಂಡಿ, ಲಿಂಗರಾಜ, ಡಾ. ರಾಮಚಂದ್ರ ಹಂಸನೂರ, ಶಿವನಗೌಡ ಗೌಡರ, ಕಳಸಾಪೂರಶೆಟ್ಟರ, ಗಂಗವ್ವ ಹೂಗಾರ, ಮುತ್ತು ಬಿಳೆಯಲಿ, ಶರೀಫ ಬಿಳೆಯಲಿ, ಸುಜಾತಾ ವಾರದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
 “ಬಸವಾದಿ ಶರಣರ ತತ್ವ ಸಮಾನತೆಗಾಗಿ, ಅದನ್ನು ಹಿಂದೂತ್ವದ ರಾಜಕೀಯಕ್ಕೆ ಬಳಸುವುದು ಸರಿಯಲ್ಲ.”
ಬಸವರಾಜ ಸೂಳಿಬಾವಿ, ಬಂಡಾಯ ಸಾಹಿತಿ
ಮೇ 31ಕ್ಕೆ ಸಾಮೂಹಿಕ ವಚನ ಪಠಣ
ಮೇ 31ರಂದು ಬೆಳಿಗ್ಗೆ 11 ಗಂಟೆಗೆ ಗದಗದ ಗಾಂಧಿ ವೃತ್ತದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ ವಿರೋಧಿಸಿ ಸಾಮೂಹಿಕ ವಚನ ಪಠಣ ಹಮ್ಮಿಕೊಳ್ಳಲಾಗಿದೆ ಎಂದು ಬಸವರಾಜ ಸೂಳಿಬಾವಿ ತಿಳಿಸಿದರು. ಮುಂದಿನ ದಿನಗಳಲ್ಲಿ ಅವಳಿ ನಗರದ ಪ್ರತಿ ವಾರ್ಡ್ ಹಾಗೂ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿ, ರಾಜ್ಯಮಟ್ಟದ ‘ಸಮಾನತಾ ಸಮಾವೇಶ’ ಆಯೋಜಿಸುವ ಚಿಂತನೆಯೂ ನಡೆದಿದೆ ಎಂದು ಬಸವರಾಜ ಸೂಳಿಬಾವಿ ಹೇಳಿದರು.

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!