ವಿಜಯಸಾಕ್ಷಿ ಸುದ್ದಿ, ಗದಗ: ಜನಪರ ಗ್ಯಾರಂಟಿ ಯೋಜನೆಗಳು, ಕೈಗಾರಿಕಾ ಕ್ರಾಂತಿ, ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ಸರ್ಕಾರ ಮೂರು ವರ್ಷದ ಆಡಳಿತದಲ್ಲಿ ಕರ್ನಾಟಕವನ್ನು ದೇಶದ ಮಾದರಿ ರಾಜ್ಯವನ್ನಾಗಿ ರೂಪಿಸಿದೆ ಎಂದು ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಹೇಳಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ ಜಿಎಸ್‌ಡಿಪಿ ಬೆಳವಣಿಗೆಯಲ್ಲಿ ಕರ್ನಾಟಕ ಶೇ. 10.2ರೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, ತೆರಿಗೆ ಸಂಗ್ರಹ ಹಾಗೂ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಎರಡನೇ ಸ್ಥಾನ ಪಡೆದಿದೆ ಎಂದು ತಿಳಿಸಿದ್ದಾರೆ.
“1.31 ಲಕ್ಷ ಕೋಟಿ ನೇರವಾಗಿ ಜನರ ಖಾತೆಗೆ”
ಗ್ಯಾರಂಟಿ ಯೋಜನೆಗಳ ಮೂಲಕ 1.31 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಮೊತ್ತವನ್ನು ನೇರವಾಗಿ ಜನರಿಗೆ ತಲುಪಿಸಲಾಗಿದೆ. ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳಿಂದ ಸುಮಾರು 4.5 ಕೋಟಿ ಕನ್ನಡಿಗರ ಬದುಕಿಗೆ ಆರ್ಥಿಕ ಬಲ ಸಿಕ್ಕಿದೆ ಎಂದು ಹೇಳಿದರು.
ಗೃಹಲಕ್ಷ್ಮೀ ಯೋಜನೆಗೆ 74,180 ಕೋಟಿ ರೂ., ಗೃಹಜ್ಯೋತಿಗೆ 28,657 ಕೋಟಿ ರೂ., ಶಕ್ತಿ ಯೋಜನೆಗೆ 18,625 ಕೋಟಿ ರೂ., ಅನ್ನಭಾಗ್ಯಕ್ಕೆ 20,211 ಕೋಟಿ ರೂ. ಹಾಗೂ ಯುವನಿಧಿಗೆ 950 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ವಿವರಿಸಿದರು.
ಕೈಗಾರಿಕೆ-ಉದ್ಯೋಗದಲ್ಲಿ ದಾಖಲೆ
ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ 117 ಕೈಗಾರಿಕಾ ಒಪ್ಪಂದಗಳ ಮೂಲಕ 6.70 ಲಕ್ಷ ಕೋಟಿ ರೂ. ಹೂಡಿಕೆ ಆಕರ್ಷಿಸಿ, 2.47 ಲಕ್ಷ ನೇರ ಉದ್ಯೋಗ ಸೃಷ್ಟಿಸಿದೆ.
ಇನ್ವೆಸ್ಟ್ ಕರ್ನಾಟಕ-2025 ಕಾರ್ಯಕ್ರಮದಲ್ಲಿ 10.27 ಲಕ್ಷ ಕೋಟಿ ರೂ. ಹೂಡಿಕೆ ಘೋಷಣೆಯಾಗಿದ್ದು, 6 ಲಕ್ಷ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.
ಉತ್ತರ ಕರ್ನಾಟಕ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳು, ಸೆಮಿಕಂಡಕ್ಟರ್ ಪಾರ್ಕ್, ಜವಳಿ ಪಾರ್ಕ್, ಎಲೆಕ್ಟ್ರಿಕ್ ವಾಹನ ಕ್ಲಸ್ಟರ್ ಹಾಗೂ ಜಿಸಿಸಿ ಕೇಂದ್ರಗಳ ಸ್ಥಾಪನೆಯಿಂದ ರಾಜ್ಯದ ಆರ್ಥಿಕತೆ ಮತ್ತಷ್ಟು ಬಲಗೊಳ್ಳಲಿದೆ ಎಂದರು.
ರೈತರು, ಕಾರ್ಮಿಕರು, ಮಹಿಳೆಯರಿಗೆ ವಿಶೇಷ ಯೋಜನೆ
ರೈತರಿಗೆ ಬೆಳೆ ಪರಿಹಾರ, ಹನಿ-ತುಂತುರು ನೀರಾವರಿ, ಕೃಷಿ ಹೊಂಡ, ಆಹಾರ ಸಂಸ್ಕರಣಾ ಘಟಕ, ತೋಟಗಾರಿಕಾ ಕಿಸಾನ್ ಮಾಲ್ ಯೋಜನೆಗಳಿಂದ ನೆರವು ನೀಡಲಾಗಿದೆ.
ಒಂದೇ ಬಾರಿ 20 ಸಾವಿರ ಪೌರಕಾರ್ಮಿಕರನ್ನು ಕಾಯಂಗೊಳಿಸಿ ಮಾಸಿಕ ವೇತನ ಸೌಲಭ್ಯ ಕಲ್ಪಿಸಲಾಗಿದೆ. ಮಹಿಳಾ ಸಬಲೀಕರಣಕ್ಕಾಗಿ 30 ಸಾವಿರ ಮಹಿಳೆಯರಿಗೆ ಉದ್ಯೋಗಾಧಾರಿತ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಆರೋಗ್ಯ-ಶಿಕ್ಷಣದಲ್ಲಿ ಹೊಸ ಹೆಜ್ಜೆ
ಆರೋಗ್ಯ ಕ್ಷೇತ್ರಕ್ಕೆ 17,473 ಕೋಟಿ ರೂ. ಮೀಸಲಿಟ್ಟು ಗೃಹ ಆರೋಗ್ಯ ಯೋಜನೆಯಡಿ ಮನೆ ಮನೆಗೆ ಆರೋಗ್ಯ ತಪಾಸಣೆ ಆರಂಭಿಸಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ 51 ಸಾವಿರ ಅತಿಥಿ ಶಿಕ್ಷಕರ ನೇಮಕ, 26 ಸರ್ಕಾರಿ ಮಹಿಳಾ ಕಾಲೇಜುಗಳ ಅಭಿವೃದ್ಧಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಉತ್ತರ ಕರ್ನಾಟಕಕ್ಕೂ ಭರಪೂರ ಯೋಜನೆ
ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಮೌಲ್ಯದ ನೀರಾವರಿ, ರಸ್ತೆ, ಕುಡಿಯುವ ನೀರು ಹಾಗೂ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆ, ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಸೇರಿದಂತೆ ಹಲವು ಯೋಜನೆಗಳಿಂದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
“ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಸಿಯುತ್ತದೆ ಎಂದವರಿಗೆ ಕರ್ನಾಟಕದ ಸಾಧನೆಗಳೇ ಉತ್ತರವಾಗಿವೆ.”ಅಶೋಕ ಮಂದಾಲಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ
ಕಾಂಗ್ರೆಸ್ ಸರ್ಕಾರದ ಪ್ರಮುಖ ಸಾಧನೆಗಳು
- ಜಿಎಸ್‌ಡಿಪಿ ಬೆಳವಣಿಗೆಯಲ್ಲಿ ದೇಶದಲ್ಲೇ 1ನೇ ಸ್ಥಾನ
- 1.31 ಲಕ್ಷ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ವೆಚ್ಚ
- 10.27 ಲಕ್ಷ ಕೋಟಿ ರೂ. ಹೂಡಿಕೆ ಆಕರ್ಷಣೆ
- 6 ಲಕ್ಷ ಉದ್ಯೋಗ ಸೃಷ್ಟಿ ಗುರಿ
- 20 ಸಾವಿರ ಪೌರಕಾರ್ಮಿಕರ ಕಾಯಂಗೊಳಿಸುವಿಕೆ
- 4.5 ಕೋಟಿ ಜನರಿಗೆ ಗ್ಯಾರಂಟಿ ಯೋಜನೆಗಳ ಲಾಭ
- 17 ಡೆಂಗೀ, ಆರೋಗ್ಯ ಸೇವೆ, ಗೃಹ ಆರೋಗ್ಯ ಯೋಜನೆ ಜಾರಿ
- ರೈತರಿಗೆ ಸಾವಿರಾರು ಕೋಟಿ ರೂ. ಬೆಳೆ ಪರಿಹಾರ ಹಾಗೂ ನೀರಾವರಿ ಯೋಜನೆಗಳು
ಕನ್ನಡಿಗರಿಗೆ ನುಡಿದಂತೆ ನಡೆದ ಸರ್ಕಾರ
2023ರ ಚುನಾವಣೆಯಲ್ಲಿ ನೀಡಿದ 593 ಭರವಸೆಗಳಲ್ಲಿ 242 ಭರವಸೆಗಳನ್ನು ಈಡೇರಿಸಿ ಶೇ. 40ರಷ್ಟು ಗುರಿ ಸಾಧಿಸಲಾಗಿದೆ. ಅಭಿವೃದ್ಧಿ, ಉದ್ಯೋಗ ಹಾಗೂ ಸಾಮಾಜಿಕ ಭದ್ರತೆಯಲ್ಲಿ ಕರ್ನಾಟಕ ದೇಶಕ್ಕೆ ಮಾದರಿಯಾಗುತ್ತಿದೆ ಎಂದು ಅಶೋಕ ಮಂದಾಲಿ ತಿಳಿಸಿದ್ದಾರೆ.



