ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದ ಪುಣ್ಯಪರ್ವದ ಅಂಗವಾಗಿ ಬೆಟಗೇರಿಯ ಐತಿಹಾಸಿಕ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಮಂಗಳವಾರ ಭಕ್ತಿ, ಪರಂಪರೆ ಮತ್ತು ಆಧ್ಯಾತ್ಮಿಕತೆಯ ವೈಭವ ಮೆರೆದಿತು. ಎಸ್‌ಎಸ್‌ಕೆ ಸಮಾಜದ ಆಶ್ರಯದಲ್ಲಿ ಆಯೋಜಿಸಲಾದ ವಿಶೇಷ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ 111 ಮುತ್ತೈದೆಯರು ಭಾಗವಹಿಸಿ ದೇವಿ ಆರಾಧನೆ ನೆರವೇರಿಸಿದರು.
ಕೆಂಪು ಸೀರೆ ಧರಿಸಿದ ಮುತ್ತೈದೆಯರು ದೇವಿಯ ಸನ್ನಿಧಿಯಲ್ಲಿ ಸಾಲಾಗಿ ಕುಳಿತು ಭಕ್ತಿಭಾವದಿಂದ ಕುಂಕುಮಾರ್ಚನೆ ನೆರವೇರಿಸಿದ ದೃಶ್ಯ ದೇವಸ್ಥಾನ ಆವರಣಕ್ಕೆ ವಿಶೇಷ ಕಳೆ ತಂದಿತು. ಕೆಂಪು ಬಣ್ಣವನ್ನು ಶಕ್ತಿ, ಮಂಗಳ ಹಾಗೂ ಸೌಭಾಗ್ಯದ ಪ್ರತೀಕವೆಂದು ಪರಿಗಣಿಸಲಾಗಿದ್ದು, 111 ಸಂಖ್ಯೆಯನ್ನು ಶುಭ ಸಂಕೇತವಾಗಿ ಆಯ್ಕೆ ಮಾಡಲಾಗಿತ್ತು.
ದೇವಿಯ ಸಹಸ್ರ ಅಂಬಾಭವಾನಿ ನಾಮಾವಳಿ ಪಠಣದ ನಡುವೆ ಪ್ರತಿಯೊಂದು ನಾಮಕ್ಕೂ ಮಹಿಳೆಯರು ಕುಂಕುಮ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಆಧ್ಯಾತ್ಮಿಕ ವಾತಾವರಣ ಭಕ್ತರನ್ನು ಭಾವಪರವಶಗೊಳಿಸಿತು.
ಬೆಳಗ್ಗಿನಿಂದಲೇ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದುಬಂದಿದ್ದು, ನೂರಾರು ಮಂದಿ ಈ ಧಾರ್ಮಿಕ ವೈಭವಕ್ಕೆ ಸಾಕ್ಷಿಯಾದರು. ಊರಿನ ಸುಖ-ಶಾಂತಿ, ಉತ್ತಮ ಮಳೆ-ಬೆಳೆ ಹಾಗೂ ಜನರ ಸಂಕಲ್ಪ ಸಿದ್ಧಿಯಾಗಲಿ ಎಂಬ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ನೆರವೇರಿತು.



