ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ ಬೆನ್ನಲ್ಲೇ, ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಆರ್ಸಿಬಿಯ ಭರ್ಜರಿ ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ವಿಜಯ್ ಮಲ್ಯ, ತಮ್ಮ ಎಕ್ಸ್ ಖಾತೆಯಲ್ಲಿ ಕನ್ನಡದಲ್ಲೇ “ನಮ್ಮ ದೊಡ್ಡ ಸಿಂಹಗಳಿಗೆ ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ. ಜೊತೆಗೆ, “ಧರ್ಮಶಾಲಾದಲ್ಲಿ ಅದ್ಭುತ ಗೆಲುವು ಸಾಧಿಸಿದ್ದೀರಿ. ಬೆಂಗಳೂರಿನ ಸಿಂಹಗಳಂತೆ ಗರ್ಜಿಸಿ ಐಪಿಎಲ್ ಫೈನಲ್‌ಗೆ ಪ್ರವೇಶಿಸಿದ್ದೀರಿ” ಎಂದು ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.
ಐಪಿಎಲ್ ಕ್ವಾಲಿಫೈಯರ್-1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್ಸಿಬಿ 92 ರನ್‌ಗಳ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 5 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿತು. ತಂಡದ ನಾಯಕ ರಜತ್ ಪಾಟಿದಾರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 33 ಎಸೆತಗಳಲ್ಲಿ ಅಜೇಯ 93 ರನ್ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 9 ಸಿಕ್ಸರ್ ಹಾಗೂ 5 ಬೌಂಡರಿಗಳು ಸೇರಿದ್ದವು. ಕೊನೆಯ ಓವರ್‌ಗಳಲ್ಲಿ ಆರ್ಸಿಬಿ ಬ್ಯಾಟರ್‌ಗಳು ಅಬ್ಬರಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.
255 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಆರಂಭದಲ್ಲೇ ಕುಸಿತ ಕಂಡಿತು. ಸಾಯಿ ಸುದರ್ಶನ್ ಹಾಗೂ ನಾಯಕ ಶುಭಮನ್ ಗಿಲ್ ಬೇಗನೇ ವಿಕೆಟ್ ಕಳೆದುಕೊಂಡರು.
ಆರ್ಸಿಬಿ ಬೌಲರ್‌ಗಳ ದಾಳಿಗೆ ತತ್ತರಿಸಿದ ಗುಜರಾತ್ ತಂಡ 162 ರನ್‌ಗೆ ಆಲೌಟ್ ಆಯಿತು. ಭುವನೇಶ್ವರ್ ಕುಮಾರ್, ಜಾಕೋಬ್ ಡಫಿ, ಜೋಶ್ ಹ್ಯಾಜಲ್ವುಡ್ ಹಾಗೂ ರಸಿಖ್ ಸಲಾಂ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಭರ್ಜರಿ ಗೆಲುವಿನೊಂದಿಗೆ ಆರ್ಸಿಬಿ ಐಪಿಎಲ್ ಇತಿಹಾಸದಲ್ಲಿ ಐದನೇ ಬಾರಿ ಫೈನಲ್‌ಗೆ ಪ್ರವೇಶಿಸಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ.



