ನವದೆಹಲಿ: ರಾಜ್ಯ ಕಾಂಗ್ರೆಸ್ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಹೈಕಮಾಂಡ್ ನೇತೃತ್ವದಲ್ಲಿ ಮಹತ್ವದ ಚರ್ಚೆಗಳು ನಡೆದಿರುವುದು ಸತ್ಯ. ಆದರೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿ ಮಾತನಾಡಿದ ಬಳಿಕವೇ ಎಲ್ಲವೂ ಸ್ಪಷ್ಟವಾಗಲಿದೆ. ಹೈಕಮಾಂಡ್ ಸಭೆಯಲ್ಲಿ ಏನು ಚರ್ಚೆಯಾಯಿತು, ಯಾವ ರೀತಿಯ ಸೂಚನೆ ನೀಡಲಾಗಿದೆ ಎಂಬುದರ ಬಗ್ಗೆ ನಮಗೆ ಇನ್ನೂ ಮಾಹಿತಿ ಇಲ್ಲ ಎಂದು ಹೇಳಿದರು.
ಗುರುವಾರ ನಡೆಯಲಿರುವ ಬ್ರೇಕ್ಫಾಸ್ಟ್ ಸಭೆಯ ಬಳಿಕ ಮುಖ್ಯಮಂತ್ರಿ ಈ ವಿಚಾರವಾಗಿ ಮಾತನಾಡಲಿದ್ದಾರೆ. ಬೆಂಗಳೂರಿನಲ್ಲಿ ಉಪಾಹಾರ ಕೂಟ ಆಯೋಜಿಸಲಾಗಿದೆ. ನಾವು ಕೂಡ ಅದರಲ್ಲಿ ಭಾಗವಹಿಸುತ್ತೇವೆ. ಅಲ್ಲಿ ಮುಖ್ಯಮಂತ್ರಿ ಏನು ಹೇಳುತ್ತಾರೆ ಎಂಬುದರ ಬಳಿಕವೇ ಮುಂದಿನ ಬೆಳವಣಿಗೆಗಳು ತಿಳಿಯಲಿವೆ ಎಂದು ಹೇಳಿದರು.
ಹೈಕಮಾಂಡ್ ನಮ್ಮ ಅಭಿಪ್ರಾಯ ಕೇಳಿದರೆ, ನಮ್ಮ ಬೇಡಿಕೆಗಳು ಮತ್ತು ಅಭಿಪ್ರಾಯಗಳನ್ನು ತಿಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿಬರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ,
ಈ ಬಗ್ಗೆ ನನಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಇನ್ನೂ ನಿರ್ದಿಷ್ಟ ಚರ್ಚೆಯೂ ನಡೆದಿಲ್ಲ. ಕೆಲವು ಮಟ್ಟದ ಚರ್ಚೆಗಳು ನಡೆಯುತ್ತಿವೆ. ಆದರೆ ಹಿರಿಯ ನಾಯಕರು ಇದುವರೆಗೆ ವೈಯಕ್ತಿಕವಾಗಿ ನನ್ನೊಂದಿಗೆ ಮಾತನಾಡಿಲ್ಲ ಎಂದು ತಿಳಿಸಿದರು.



