ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದು ಇದೀಗ ಕೇವಲ ಅಧಿಕೃತ ಪ್ರಕ್ರಿಯೆಯಷ್ಟೇ ಬಾಕಿ ಉಳಿದಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಮುಖ್ಯಮಂತ್ರಿ ಕಚೇರಿಯಿಂದ ಲೋಕಭವನ (ರಾಜಭವನ) ಭೇಟಿಗೆ ಸಮಯ ಕೋರಿ ಅಧಿಕೃತ ಮಾಹಿತಿ ರವಾನೆಯಾಗಿದೆ.
ಮುಖ್ಯಮಂತ್ರಿಗಳ ಸಚಿವಾಲಯದಿಂದ ಲೋಕಭವನಕ್ಕೆ ಸಂದೇಶ ಕಳುಹಿಸಲಾಗಿದ್ದು, ನಾಳೆ (ಗುರುವಾರ) ಮಧ್ಯಾಹ್ನ ಸಿದ್ದರಾಮಯ್ಯ ಅವರು ಭೇಟಿ ನೀಡಲಿದ್ದಾರೆ ಎಂದು ತಿಳಿಸಲಾಗಿದೆ. ಆದರೆ ಭೇಟಿಯ ನಿಖರ ಸಮಯವನ್ನು ಇನ್ನೂ ಬಹಿರಂಗಪಡಿಸಿಲ್ಲ. ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳ ಪ್ರಕಾರ, ಬೆಳಗ್ಗೆ ಜಂಟಿ ಸುದ್ದಿಗೋಷ್ಠಿ ಬಳಿಕ ಮಧ್ಯಾಹ್ನ ಸಿದ್ದರಾಮಯ್ಯ ಅವರು ರಾಜೀನಾಮೆ ಪತ್ರ ಸಲ್ಲಿಸುವ ಸಾಧ್ಯತೆ ಇದೆ.
ಈ ಬೆಳವಣಿಗೆಯ ನಡುವೆಯೇ ಸಚಿವ ಚಲುವರಾಯಸ್ವಾಮಿ ಸಿಎಂ ನಿವಾಸಕ್ಕೆ ಭೇಟಿ ನೀಡಿ ಮಹತ್ವದ ಚರ್ಚೆ ನಡೆಸಿದ್ದಾರೆ.
ಇದರ ಜೊತೆಗೆ, ತಮ್ಮ ರಾಜೀನಾಮೆಗೆ ಮುನ್ನ ‘ಜಾತಿಗಣತಿ ವರದಿ’ಯನ್ನು ಅಧಿಕೃತವಾಗಿ ಸ್ವೀಕರಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಇಂದು ಸಂಜೆ 5 ಗಂಟೆಗೆ ವಿಧಾನಸೌಧಕ್ಕೆ ಆಗಮಿಸಲಿರುವ ಅವರು, ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಸ್ವೀಕರಿಸಲಿದ್ದಾರೆ.
ಈ ಕುರಿತು ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್. ನಾಯ್ಕ್, “ವರದಿ ಒಂದು ತಿಂಗಳ ಹಿಂದೆಯೇ ಸಿದ್ಧವಾಗಿತ್ತು. ಸದಸ್ಯರ ಲಭ್ಯತೆ ಸಮಸ್ಯೆಯಿಂದ ಸಲ್ಲಿಕೆ ತಡವಾಯಿತು. ರಾಜಕೀಯ ಬೆಳವಣಿಗೆಗಳಿಗೂ ವರದಿ ಸಲ್ಲಿಕೆಗೆ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.



