ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಲು ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಹೊಸ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿನೂತನ ಹೆಜ್ಜೆ ಇಟ್ಟಿದ್ದು, ಹೊಸದಾಗಿ ದಾಖಲಾಗುವ ಪ್ರತಿಯೊಬ್ಬ ವಿದ್ಯಾರ್ಥಿಯ ಹೆಸರಿನಲ್ಲಿ ₹1000 ಠೇವಣಿ ಇಡುವ ಘೋಷಣೆ ಮಾಡಿದೆ.
ಈ ವಿಶಿಷ್ಟ ಪ್ರಯತ್ನ ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರಿ ಶಾಲೆಗಳ ಮೇಲಿನ ವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಿದೆ.
1ರಿಂದ 5ನೇ ತರಗತಿ ಮಕ್ಕಳಿಗೆ ವಿಶೇಷ ಸೌಲಭ್ಯ
ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಶಾಲೆಗೆ 1ರಿಂದ 5ನೇ ತರಗತಿಯವರೆಗೆ ದಾಖಲಾಗುವ ಪ್ರತಿಯೊಂದು ವಿದ್ಯಾರ್ಥಿಯ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ₹1000 ಠೇವಣಿ ಇಡಲಾಗುತ್ತಿದೆ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ 10ನೇ ತರಗತಿ ಹಾಗೂ ಪಿಯುಸಿ ಶಿಕ್ಷಣಕ್ಕೆ ಇದು ಸಹಕಾರಿಯಾಗಲಿದೆ ಎಂಬುದು ಶಿಕ್ಷಕರ ಅಭಿಪ್ರಾಯವಾಗಿದೆ.
ಇದರ ಜೊತೆಗೆ ಉಚಿತ ಶಾಲಾ ಬ್ಯಾಗ್, ಟೈ-ಬೆಲ್ಟ್, ಶಾಲೆಯ ಹೆಸರುಳ್ಳ ಟೀ-ಶರ್ಟ್ ಹಾಗೂ ಮಗ್ಗಿ ಪುಸ್ತಕಗಳನ್ನು ಸಹ ನೀಡಲು ಶಾಲೆ ಮುಂದಾಗಿದೆ.
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಾದರೂ ಇಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಲಾಗಿದ್ದು, ಟಿವಿ ಹಾಗೂ ಯೂಟ್ಯೂಬ್ ಆಧಾರಿತ ವಿಡಿಯೋ ಪಾಠಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
ಶುದ್ಧ ಕುಡಿಯುವ ನೀರು, ಶೌಚಾಲಯ ಹಾಗೂ ಎಲ್ಲ ತರಗತಿಗಳಲ್ಲೂ ಫ್ಯಾನ್ ವ್ಯವಸ್ಥೆ ಇರುವುದರಿಂದ ಶಾಲೆ ಮಕ್ಕಳಿಗೆ ಆಕರ್ಷಕ ಶಿಕ್ಷಣ ವಾತಾವರಣ ಒದಗಿಸಿದೆ.
ಸರ್ಕಾರದಿಂದ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್, ಬಿಸಿಯೂಟ ಸೇರಿದಂತೆ ಅನೇಕ ಸೌಲಭ್ಯಗಳು ದೊರೆಯುತ್ತಿದ್ದರೂ ಹಲವು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.
ಆದರೆ ಬೆಳ್ಳಟ್ಟಿ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಸಮುದಾಯದ ಸಹಕಾರದೊಂದಿಗೆ ಮಕ್ಕಳ ದಾಖಲಾತಿ ಹೆಚ್ಚಿಸಲು ಹೊಸ ಪ್ರಯತ್ನ ಕೈಗೊಂಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
“ಗ್ರಾಮದ ಸಮುದಾಯ ಮತ್ತು ಶಿಕ್ಷಕರ ಸಹಕಾರದಿಂದ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಆಕರ್ಷಿಸಲು ಈ ಯೋಜನೆ ರೂಪಿಸಲಾಗಿದೆ. ಹೊಸದಾಗಿ ದಾಖಲಾಗುವ ವಿದ್ಯಾರ್ಥಿಗಳಿಗೆ ₹1000 ಠೇವಣಿ, ಶಾಲಾ ಬ್ಯಾಗ್, ಟೈ-ಬೆಲ್ಟ್, ಟೀ-ಶರ್ಟ್ ಹಾಗೂ ಮಗ್ಗಿ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತದೆ.”ಗಿರೀಶ ಕೊಡಬಾಳ, ಮುಖ್ಯೋಪಾಧ್ಯಾಯರು“ಶಾಲೆಯಲ್ಲಿ ಹೊಸದಾಗಿ ದಾಖಲಾಗುವ ವಿದ್ಯಾರ್ಥಿಗಳಿಗೆ ₹1000 ಠೇವಣಿ ಹಾಗೂ ಉಚಿತ ಶೈಕ್ಷಣಿಕ ಸಾಮಗ್ರಿ ನೀಡುತ್ತಿರುವುದು ಶಿಕ್ಷಣ ಮತ್ತು ದಾಖಲಾತಿ ಹೆಚ್ಚಿಸಲು ಮಾದರಿಯಾದ ಕಾರ್ಯಕ್ರಮ. ಸರ್ಕಾರಿ ಶಾಲೆಗಳ ಉಳಿವಿಗೆ ಶಿಕ್ಷಕರ ಇಚ್ಛಾಶಕ್ತಿ ಮತ್ತು ಸಮುದಾಯದ ಸಹಕಾರವೇ ದೊಡ್ಡ ಬಲ.”ಆರ್.ಎಸ್. ಬುರಡಿ, ಉಪನಿರ್ದೇಶಕರು



