ವಿಜಯಸಾಕ್ಷಿ ಸುದ್ದಿ, ಗದಗ: ಜಾಗತೀಕರಣದ ಕರಿನೆರಳಿನ ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬ ಮನುಷ್ಯನಲ್ಲೂ ಗಾಂಧೀಜಿ ಪ್ರಜ್ಞೆ ಮತ್ತು ಅಂಬೇಡ್ಕರ್ ಪ್ರಜ್ಞೆ ಮೈಗೂಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹಿರಿಯ ಸಾಹಿತಿ, ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಗ್ರಂಥಾಲಯ ಅನುಷ್ಠಾನ ಸಮಿತಿಯ ಸಂಚಾಲಕ, ಪ್ರಕಾಶಕ ಎ.ಎಸ್. ಮಕಾನದಾರ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘದ ರಾಜ್ಯ ಸಮಾವೇಶದ ಪೂರ್ವಭಾವಿ ಸಿದ್ಧತಾ ಸಭೆ ಹಾಗೂ ಕಾರ್ಯಾಗಾರ ಅಂಗವಾಗಿ ಬೆಂಗಳೂರಿನ ಬಿ.ಬಿ.ಎಂ.ಪಿ ಮುಖ್ಯ ಕಚೇರಿಯ ಡಾ. ರಾಜ್ಕುಮಾರ್ ಗಾಜಿನ ಮನೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಾಂಗ ಇಲಾಖೆಯ ಸಹೋದ್ಯೋಗಿ ಶಫಿವುಲ್ಲ ರಚಿಸಿದ “ಸಮಾನತೆಯ ಬೆಳಕು ಡಾ. ಬಿ.ಆರ್. ಅಂಬೇಡ್ಕರ್” ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ರಾಜ್ಯದ 240 ತಾಲೂಕು ಘಟಕಗಳು ಹಾಗೂ 32 ಜಿಲ್ಲಾ ಘಟಕಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ, ವಿವಿಧ ಇಲಾಖೆಗಳ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು ಸೇವಾ ಅವಧಿಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು. ಉನ್ನತ ಅಧಿಕಾರಿಗಳು, ಸಾರ್ವಜನಿಕರು ಹಾಗೂ ರಾಜಕೀಯ ವ್ಯಕ್ತಿಗಳಿಂದ ನಡೆಯುತ್ತಿರುವ ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯ ಮತ್ತು ಶೋಷಣೆಯನ್ನು ತಡೆಗಟ್ಟಲು ಸರ್ಕಾರದ ಗಮನ ಸೆಳೆಯುವ ಕುರಿತು ಸಭೆಯಲ್ಲಿ ಒತ್ತಾಯಿಸಲಾಯಿತು.
2026ನೇ ಸಾಲಿನ ಸದಸ್ಯತ್ವ ನೋಂದಣಿಯನ್ನು ರಾಜ್ಯದ ಎಲ್ಲಾ 84 ಇಲಾಖೆಗಳ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸುವ ನಿರ್ಧಾರ ಕೈಗೊಳ್ಳಲಾಯಿತು. ಬೆಳಗಾವಿ ವಿಭಾಗೀಯ, ಮೈಸೂರು ವಿಭಾಗೀಯ ಹಾಗೂ ಬೆಂಗಳೂರು ರಾಜ್ಯ ಸಮಾವೇಶಗಳನ್ನು ಶೀಘ್ರದಲ್ಲೇ ಆಯೋಜಿಸಲು ತೀರ್ಮಾನಿಸಲಾಯಿತು.
ರಾಜ್ಯದಲ್ಲಿ ಹಲವು ವರ್ಷಗಳಿಂದ ಖಾಲಿ ಉಳಿದಿರುವ ಬ್ಯಾಕ್ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಹಾಗೂ ಎಲ್ಲಾ ಇಲಾಖೆಗಳಲ್ಲಿ ರೋಸ್ಟರ್ ಬಿಂದುಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಸಭೆ ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು.
ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಮಹೇಶ್ ಸಿ. ಹುಬಳ್ಳಿ, ರಾಜ್ಯ ಕಾರ್ಯಾಧ್ಯಕ್ಷ ಜೈ ಭೀಮ್, ರಾಜ್ಯ ಕಾರ್ಯಾಧ್ಯಕ್ಷ ಅನಿಲ್ ಕುಮಾರ್, ನ್ಯಾಯಾಂಗ ಇಲಾಖೆ ಪ್ರಧಾನ ಕಾರ್ಯದರ್ಶಿ ಶಶಿಕಲಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಎಸ್. ಜಡಗಿ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಶ್ರೀಧರ್ ಕೊಟ್ರೆ, ಜಿಲ್ಲಾ ಗೌರವಾಧ್ಯಕ್ಷ ನಾಗರಾಜ್, ರಾಜ್ಯ ಉಪಾಧ್ಯಕ್ಷ ಮುನಿಕೃಷ್ಣಪ್ಪ, ನ್ಯಾಯಾಂಗ ಇಲಾಖೆ ರಾಜ್ಯ ಪದಾಧಿಕಾರಿಗಳಾದ ಸಂಗಮ ಫರ್ತಾಬಾದ್, ಸುನಿತಾ ಕೊಂಬಿನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗೀತಾ ಮೇಲಿನಕೇರಿ, ಅಶೋಕ್ ಕಲಾದಗಿ, ರವಿ ಹಾದಿಮನಿ, ಶಿಕ್ಷಣಪ್ಪ ಮಂಟಾಳೆ, ಬೆಳಗಾವಿ ಜಿಲ್ಲಾಧ್ಯಕ್ಷ ಮಹದೇವ ಐಹೊಳೆ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಗೋವಿಂದ ಸಣ್ಣಕ್ಕಿ ಹಾಗೂ ಅಂಬಿಕಾ ಗಾಯಕ್ವಾಡ್ ಸೇರಿದಂತೆ ಅನೇಕ ಪದಾಧಿಕಾರಿಗಳು ಭಾಗವಹಿಸಿದ್ದರು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಉಪಾಧ್ಯಕ್ಷೆ ಡಾ. ಮಲ್ಲಿಕಾ ಎಂ. ದಾವಣಗೆರೆ, ಕವಿ-ಕಲಾವಿದ ಹಾಗೂ ಸಿನಿಮಾ ನಿರ್ದೇಶಕ ಹರ್ಷ ಹಜರತ್ ಅಲಿ, ಸೌರಭ ಸಾಂಸ್ಕೃತಿಕ ವೇದಿಕೆಯ ರಹಿಮಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಅನ್ಯಾಯ, ದಬ್ಬಾಳಿಕೆ ಮತ್ತು ಶೋಷಣೆಯನ್ನು ತಡೆಗಟ್ಟಲು ಸಂಘಟಿತ ಹೋರಾಟ ಅಗತ್ಯ. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳು ಬಲವಾಗಬೇಕು.”
ಎ.ಎಸ್. ಮಕಾನದಾರ, ಸಾಹಿತಿ



