ತುಮಕೂರು: ಕರ್ನಾಟಕ ರಾಜಕೀಯದ ಅತ್ಯಂತ ನಿರ್ಣಾಯಕ ಘಟ್ಟದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ನೊಣವಿನಕೆರೆ ಅಜ್ಜಯ್ಯರಿಂದ ಮಹತ್ವದ ಸೂಚನೆ ಸಿಕ್ಕಿದೆ. “ಈಗ ಮಾತಾಡಿದರೆ ಎಲ್ಲವೂ ಕೈ ತಪ್ಪಬಹುದು” ಎಂಬ ಸ್ಪಷ್ಟ ಎಚ್ಚರಿಕೆಯನ್ನು ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳು ನೀಡಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ತೀವ್ರ ರಾಜಕೀಯ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿ, ಪ್ರಮಾಣವಚನ ಪೂರ್ಣಗೊಳ್ಳುವವರೆಗೂ ಮಾಧ್ಯಮಗಳ ಮುಂದೆ ಯಾವುದೇ ಪ್ರತಿಕ್ರಿಯೆ ನೀಡಬಾರದು ಎಂದು ಶ್ರೀಗಳು ಸೂಚಿಸಿದ್ದಾರೆ. “ಮಾತು ಆಡಿದರೆ ಮುತ್ತು ಒಡೆದು ಹೋಗುತ್ತದೆ” ಎಂಬ ರೂಪಕದ ಮೂಲಕ ರಾಜಕೀಯವಾಗಿ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಡಿಕೆಶಿಗೆ ಸಂದೇಶ ರವಾನಿಸಲಾಗಿದೆ.
ಈ ಸೂಚನೆಯ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರು ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸದೆ ನೇರವಾಗಿ ತೆರಳಿದ್ದು ಗಮನ ಸೆಳೆದಿದೆ. ಅಲ್ಲದೆ, ಡಿಕೆಶಿ ಆಪ್ತ ವಲಯಕ್ಕೂ ಯಾವುದೇ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಇದೀಗ ನೊಣವಿನಕೆರೆ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಡಿಕೆ ಶಿವಕುಮಾರ್ ಅವರನ್ನು ಖಾಸಗಿವಾಗಿ ಭೇಟಿಯಾಗಲಿದ್ದಾರೆ. ಈ ಭೇಟಿ ರಾಜಕೀಯ ವಲಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ಕಾರಣವಾಗಿದೆ.
ದೆಹಲಿಗೆ ತೆರಳುವ ಮುನ್ನ ಡಿಕೆ ಶಿವಕುಮಾರ್ ಅವರು ನೊಣವಿನಕೆರೆ ಮಠಕ್ಕೆ ಎರಡು ಬಾರಿ ಭೇಟಿ ನೀಡಿ ವಿಶೇಷ ಆಶೀರ್ವಾದ ಪಡೆದಿದ್ದರು. “ಅಜ್ಜಯ್ಯ ಹೇಳಿದ ಮಾತು ನನಗೆ ಅಂತಿಮ” ಎಂದು ಡಿಕೆಶಿ ಈ ಹಿಂದೆ ಹೇಳಿದ್ದನ್ನು ಇದೀಗ ಅವರ ಮೌನವೇ ಮತ್ತೆ ಸಾಬೀತುಪಡಿಸುತ್ತಿದೆ.



