HomeGadag Newsಗುಂಡಿಗಳ ಗೂಡಾದ ಪಾಲಾ–ಬದಾಮಿ ರಸ್ತೆ!

ಗುಂಡಿಗಳ ಗೂಡಾದ ಪಾಲಾ–ಬದಾಮಿ ರಸ್ತೆ!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ರೋಣ: ಪಾಲಾ–ಬದಾಮಿ ರಸ್ತೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೊಳೆಆಲೂರು ಕ್ರಾಸ್‌ನಿಂದ ಹಿರೇಹಾಳವರೆಗೆ ರಸ್ತೆಯುದ್ದಕ್ಕೂ ಭಾರೀ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಪ್ರತಿದಿನ ಜೀವ ಪಣಕ್ಕಿಟ್ಟು ಸಂಚರಿಸುವ ಪರಿಸ್ಥಿತಿ ಎದುರಾಗಿದೆ.
ಬೈಕ್ ಸವಾರರು ಒಂದು ಗುಂಡಿ ತಪ್ಪಿಸಲು ಹೋಗಿ ಮತ್ತೊಂದು ಗುಂಡಿಗೆ ಬಿದ್ದು ಅಪಘಾತಕ್ಕೀಡಾಗುತ್ತಿರುವ ಘಟನೆಗಳು ಸಾಮಾನ್ಯವಾಗಿವೆ. ಮಳೆ ಬಂದರೆ ಕೆಸರಿನ ಕೆರೆ, ಬಿಸಿಲು ಬಂದರೆ ಧೂಳಿನ ಸುಂಟರಗಾಳಿ ಎದ್ದುಕೊಳ್ಳುತ್ತಿದ್ದು, ಶಾಲಾ ಮಕ್ಕಳು, ರೈತರು, ರೋಗಿಗಳು ಹಾಗೂ ಪ್ರವಾಸಿಗರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ರಸ್ತೆಯುದ್ದಕ್ಕೂ ಕಿತ್ತುಹೋದ ಡಾಂಬರು, ಆಳವಾದ ಗುಂಡಿಗಳು ಮತ್ತು ಧೂಳಿನ ರಾಶಿ ಕಾಣಿಸುತ್ತಿದೆ. ಮಳೆಗಾಲದಲ್ಲಿ ರಸ್ತೆ ಕೆಸರಿನ ಹಳ್ಳವಾಗಿ ಮಾರ್ಪಡುತ್ತಿದ್ದು, ಬೇಸಿಗೆಯಲ್ಲಿ ಧೂಳಿನ ಮೋಡ ಆವರಿಸುತ್ತಿದೆ. ವಾಹನ ಸವಾರರು ರಸ್ತೆ ಮೇಲೆ ಅಲ್ಲ, ಅಪಘಾತದ ಹಾದಿಯಲ್ಲಿ ಸಂಚರಿಸುತ್ತಿರುವ ಅನುಭವ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಪ್ರತಿಕ್ಷಣವೂ ಆತಂಕದಲ್ಲೇ ಓಡಾಡುವಂತಾಗಿದೆ.
ಒಂದು ಗುಂಡಿ ತಪ್ಪಿಸಲು ಹೋಗಿ ಮತ್ತೊಂದು ಗುಂಡಿಗೆ ಬಿದ್ದು ಗಾಯಗೊಳ್ಳುವ ಘಟನೆಗಳು ಹೆಚ್ಚುತ್ತಿವೆ. ಶಾಲಾ ವಾಹನಗಳು ಗುಂಡಿಗಳಲ್ಲಿ ಜಿಗಿಯುತ್ತಿದ್ದು, ಗರ್ಭಿಣಿಯರು ಆಸ್ಪತ್ರೆಗೆ ತೆರಳುವಾಗ ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತರು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಪರದಾಡುತ್ತಿದ್ದಾರೆ. ತುರ್ತು ಚಿಕಿತ್ಸೆಗೆ ತೆರಳುವ ರೋಗಿಗಳಿಗೆ ಸಮಯಕ್ಕೆ ಆಸ್ಪತ್ರೆಗೆ ತಲುಪುವುದೇ ಕಷ್ಟಕರವಾಗಿದೆ.
ರಾಜ್ಯದ ಹೆಮ್ಮೆಯ ಪ್ರವಾಸಿ ತಾಣಗಳಾದ ಬನಶಂಕರಿ ದೇವಿ ದೇವಸ್ಥಾನ, ಚಾಲುಕ್ಯರ ದೇವಾಲಯಗಳು ಹಾಗೂ ಗುಹೆಗಳಿಗೆ ತೆರಳುವ ಸಾವಿರಾರು ಪ್ರವಾಸಿಗರು ಇದೇ ರಸ್ತೆಯಲ್ಲಿ ನರಳುತ್ತಿದ್ದಾರೆ. ಇದು ಪ್ರವಾಸಿ ಮಾರ್ಗವೇ ಅಥವಾ ಅಪಘಾತದ ಹಾದಿಯೇ ಎಂದು ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು ಪ್ರಶ್ನಿಸುವಂತಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ವೇದಿಕೆ ಮೇಲೆ ಭಾಷಣ ಮಾಡುವ ಸರ್ಕಾರ, ಪ್ರವಾಸಿಗರು ಸಂಚರಿಸುವ ರಸ್ತೆಯನ್ನು ಸುಧಾರಿಸಲು ವಿಫಲವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಒಂದು ಪ್ರದೇಶದ ಅಭಿವೃದ್ಧಿಯನ್ನು ಅಲ್ಲಿನ ರಸ್ತೆ ಸ್ಥಿತಿ ತೋರಿಸುತ್ತದೆ ಎನ್ನಲಾಗುತ್ತದೆ. ಆದರೆ ಗದಗ–ಪಾಲಾ–ಬದಾಮಿ ರಸ್ತೆಯ ದುಸ್ಥಿತಿ ನೋಡಿದರೆ ಅಭಿವೃದ್ಧಿಯ ಘೋಷಣೆಗಳು ಕೇವಲ ಮಾತುಗಳಾಗಿಯೇ ಉಳಿದಿವೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಈ ಹಿಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸಭೆಗೆ ಕಳುಹಿಸಿದ್ದ ಬದಾಮಿ ಕ್ಷೇತ್ರದ ರಸ್ತೆ ಸ್ಥಿತಿಯೇ ಇಂದು ದಯನೀಯವಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲಾಡಳಿತದ ವಿರುದ್ಧವೂ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ. “ಪ್ರವಾಸೋದ್ಯಮ ಬೆಳೆಸುವ ಮೊದಲು ರಸ್ತೆ ಉಳಿಸಿ” ಎಂಬ ಕೂಗು ಗ್ರಾಮೀಣ ಭಾಗದಲ್ಲಿ ಕೇಳಿ ಬರುತ್ತಿದೆ.
ರೋಣ ಶಾಸಕ ಜಿ.ಎಸ್. ಪಾಟೀಲ ಹಾಗೂ ಬದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ವಿರುದ್ಧವೂ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆ ವೇಳೆ ಮಾತ್ರ ಜನರ ಮನೆ ಬಾಗಿಲಿಗೆ ಬರುವ ನಾಯಕರು, ರಸ್ತೆ ಹಾಳಾದಾಗ ಎಲ್ಲಿಗೆ ಹೋಗುತ್ತಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ.
ಲೋಕೋಪಯೋಗಿ ಇಲಾಖೆ ವಿರುದ್ಧವೂ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಕೋಟಿ ಕೋಟಿ ಅನುದಾನ ಬಿಡುಗಡೆಯಾದರೂ ರಸ್ತೆ ಕೆಲವೇ ತಿಂಗಳಲ್ಲಿ ಹಾಳಾಗುತ್ತಿದೆ. ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಯುತ್ತಿದೆಯೇ? ಗುತ್ತಿಗೆದಾರರು ಮತ್ತು ಅಧಿಕಾರಿಗಳ ಹೊಂದಾಣಿಕೆಯಲ್ಲಿ ಜನರ ತೆರಿಗೆ ಹಣ ಮಣ್ಣಾಗುತ್ತಿದೆಯೇ ಎಂಬ ಅನುಮಾನಗಳು ಸಾರ್ವಜನಿಕರಲ್ಲಿ ಹೆಚ್ಚಾಗಿವೆ.
 “ಅಪಘಾತ ಸಂಭವಿಸಿದ ಬಳಿಕ ಮಾತ್ರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ಪರಿಪಾಠ ಮುಂದುವರಿದಿದೆ. ರಸ್ತೆ ಸಂಪೂರ್ಣ ಹಾಳಾದರೂ ತಾತ್ಕಾಲಿಕ ಗುಂಡಿ ಮುಚ್ಚುವ ಕೆಲಸವೂ ಸಮರ್ಪಕವಾಗಿ ನಡೆಯುತ್ತಿಲ್ಲ. ಈಗಾದರೂ ಸರ್ಕಾರ ಎಚ್ಚೆತ್ತು ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ”
ದ್ವಿಚಕ್ರ ವಾಹನ ಸವಾರರು
“ದೊಡ್ಡ ಹುದ್ದೆಗಳ ಆಸೆಯಲ್ಲಿ ರಾಜಕೀಯ ಮಾಡುವ ನಾಯಕರೇ, ಮೊದಲು ರಸ್ತೆ ಸುಧಾರಿಸಿ. ಜನರು ಕೇಳುತ್ತಿರುವುದು ಅಧಿಕಾರದ ಅಹಂಕಾರವಲ್ಲ; ಸುರಕ್ಷಿತ ರಸ್ತೆ ಮತ್ತು ಬದುಕಿನ ಭರವಸೆ. ಪ್ರತಿದಿನ ಜನರ ಜೀವ ಅಪಾಯದಲ್ಲಿದ್ದರೂ ಮೌನವಾಗಿರುವುದು ಜನಪ್ರತಿನಿಧಿಗಳ ನಿರ್ಲಕ್ಷ್ಯದ ಪರಮಾವಧಿಯಾಗಿದೆ”
 ಪ್ರಜ್ಞಾವಂತ ನಾಗರಿಕರು

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!