ಬೆಂಗಳೂರು:- ಇಂದು ನಗರದಲ್ಲಿ ಸುರಿದ ಭಾರೀ ಮಳೆಗೆ ದುರಂತವೊಂದು ಸಂಭವಿಸಿದೆ.
ಭಾರೀ ಮಳೆ ಹಿನ್ನೆಲೆ ಕ್ಲಬ್ ಕಾಂಪೌಂಡ್ ಕುಸಿದು ಆಟೋ ಮೇಲೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ. ಗಂಗೊಂಡನಹಳ್ಳಿ ನಿವಾಸಿಯಾದ ಶಿವಬೋರಯ್ಯ (56) ಮೃತ ವ್ಯಕ್ತಿ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ನಗರದಾದ್ಯಂತ ಸಂಜೆ ವೇಳೆ ಮತ್ತೆ ಮಳೆರಾಯ ಅಬ್ಬರಿಸಿದ್ದು, ರಸ್ತೆಗಳು ಸೇರಿ ಅಂಡರ್‌ಪಾಸ್‌ಗಳು ಜಲಾವೃತಗೊಂಡಿದೆ. ಅಷ್ಟೇ ಅಲ್ಲ ಕೆಲವೆಡೆ ಮರಗಳು ಧರೆಗುರುಳಿದ ಘಟನೆಗಳು ಕೂಡ ವರದಿಯಾಗಿವೆ.
ಕೆ.ಆರ್. ಸರ್ಕಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಮಧ್ಯೆ GBA ಕಮಿಷನರ್ ಮಹೇಶ್ವರ್ ರಾವ್ ಅವರು ಅಂಡರ್‌ಪಾಸ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಅಂಡರ್‌ಪಾಸ್‌ಗಳಲ್ಲಿ ನೀರು ಸಂಗ್ರಹವಾಗದಂತೆ ಹಾಗೂ ರಸ್ತೆಗಳಲ್ಲಿ ಸರಾಗವಾಗಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕಸದ ಸಮರ್ಪಕ ವಿಲೇವಾರಿ ಮತ್ತು ಒಣಗಿದ ಮರಗಳ ತೆರವಿಗೆ ವಿಶೇಷ ಗಮನ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.



