ಹಾಸನ: ಉಪತಹಶೀಲ್ದಾರ್‌ರೊಬ್ಬರು ಲಾಡ್ಜ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ. ಮೃತರನ್ನು ತಿಮ್ಮಯ್ಯ (52) ಎಂದು ಗುರುತಿಸಲಾಗಿದ್ದು, ಅವರು ಪ್ರಸ್ತುತ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಉಪತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಖಾಸಗಿ ಲಾಡ್ಜ್‌ನಲ್ಲಿ ಈ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಮುನ್ನ ತಿಮ್ಮಯ್ಯ ನಾಲ್ಕು ಪುಟಗಳ ಡೆತ್‌ನೋಟ್ ಬರೆದಿಟ್ಟು ಹೋಗಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮೇ 30ರಂದು ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ಮೂಲತಃ ಕೊಡಗು ಜಿಲ್ಲೆಯವರಾದ ತಿಮ್ಮಯ್ಯ, ಕುಟುಂಬದೊಂದಿಗೆ ಹಾಸನ ನಗರದ ಚನ್ನಪಟ್ಟಣದ ದ್ಯಾವಮ್ಮ ಬಡಾವಣೆಯಲ್ಲಿ ವಾಸವಾಗಿದ್ದರು. ಅವರು ಮೂರು ವರ್ಷಗಳ ಹಿಂದೆ ಹಾಸನದಲ್ಲಿಯೂ ಸೇವೆ ಸಲ್ಲಿಸಿದ್ದ ಹಿನ್ನೆಲೆ ಹೊಂದಿದ್ದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಡೆತ್‌ನೋಟ್‌ನಲ್ಲಿರುವ ವಿವರಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ.
ಈ ಸಂಬಂಧ ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.



