ವಿಜಯಸಾಕ್ಷಿ ಸುದ್ದಿ, ಗದಗ: ಗದಗವಾಣಿ ಪ್ರಾದೇಶಿಕ ದಿನಪತ್ರಿಕೆಯ ೪ನೇ ವಾರ್ಷಿಕೋತ್ಸವ ಹಾಗೂ ಕ್ರಾಂತಿಸೂರ್ಯ ಜೈಭೀಮ್ ಸೇನೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಗದಗ ನಗರದ ಜಗದ್ಗುರು ತೋಂಟದಾರ್ಯ ಮಠದ ಆವರಣದಲ್ಲಿ ಆಯೋಜಿಸಲಾದ “ಗದಗವಾಣಿ ಗಾನಕೋಗಿಲೆ ಸೀಸನ್-೫” ಗ್ರ್ಯಾಂಡ್ ಫಿನಾಲೆ, “ಕರುನಾಡ ಕಾಯಕ ಸಮ್ಮಾನ್-೨೦೨೬” ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವು ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸದಲ್ಲೇ ವಿಶಿಷ್ಟ ಸಂಭ್ರಮಕ್ಕೆ ಸಾಕ್ಷಿಯಾಯಿತು.
ಸಂಗೀತ, ಸಂಸ್ಕೃತಿ, ಸನ್ಮಾನ ಹಾಗೂ ಜನಸಾಗರದ ಸಂಭ್ರಮ ಒಂದೇ ವೇದಿಕೆಯಲ್ಲಿ ಒಂದಾಗಿದ್ದ ಈ ಕಾರ್ಯಕ್ರಮ ಗದಗ ಜಿಲ್ಲೆಯ ಅತ್ಯಂತ ಭವ್ಯ ಮತ್ತು ಸ್ಮರಣೀಯ ಸಮಾರಂಭಗಳಲ್ಲಿ ಒಂದಾಗಿ ಹೊರಹೊಮ್ಮಿತು.
ಸಾಧಕರಿಗೆ ರಾಜ್ಯ ಮಟ್ಟದ ಗೌರವ
ಶಿಕ್ಷಣ, ಸಾಹಿತ್ಯ, ಸಂಗೀತ, ಕಲೆ, ಸಮಾಜಸೇವೆ, ಪತ್ರಿಕೋದ್ಯಮ, ವೈದ್ಯಕೀಯ, ಕೃಷಿ, ಉದ್ಯಮ, ಯುವಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪ್ರದಾನಿಸಿ ಗೌರವಿಸಲಾಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಗಣ್ಯರು, ಕಲಾವಿದರು, ಸಾಮಾಜಿಕ ಹೋರಾಟಗಾರರು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು. ಈ ಸಂಚಿಕೆಯಲ್ಲಿ ಕಾರ್ಯಕ್ರಮದ ಅಪರೂಪದ ಕ್ಷಣಗಳು, ಪ್ರಶಸ್ತಿ ಪುರಸ್ಕೃತರ ಸನ್ಮಾನ, ಗಾನಕೋಗಿಲೆ ಸ್ಪರ್ಧೆಯ ವಿಶೇಷ ದೃಶ್ಯಗಳು ಹಾಗೂ ಗಣ್ಯರ ಉಪಸ್ಥಿತಿಯ ಛಾಯಾಚಿತ್ರಗಳು ಪ್ರಕಟವಾಗಿವೆ.
ಗಾನಕೋಗಿಲೆ ಗಾಯನಕ್ಕೆ ಮನಸೋತ ಜನತೆ
“ಗದಗವಾಣಿ ಗಾನಕೋಗಿಲೆ ಸೀಸನ್-೫”ರ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಪರ್ಧಿಗಳು ಸುಮಧುರ ಗಾಯನದ ಮೂಲಕ ಪ್ರೇಕ್ಷಕರ ಮನ ಗೆದ್ದರು. ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಜನರಿಂದ ಭಾರೀ ಮೆಚ್ಚುಗೆ ಪಡೆದವು.
ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೆ ಸಭಾಂಗಣ ಜನಸಾಗರದಿಂದ ಕಿಕ್ಕಿರಿದು ತುಂಬಿತ್ತು.
ಗದಗದ ಸಾಂಸ್ಕೃತಿಕ ಶಕ್ತಿಗೆ ಕನ್ನಡಿ
ಕಾರ್ಯಕ್ರಮವು ಗದಗ ಜಿಲ್ಲೆಯ ಸಾಂಸ್ಕೃತಿಕ ವೈಭವ, ಪ್ರತಿಭೆಗಳ ಸಾಮರ್ಥ್ಯ ಹಾಗೂ ಸಾಮಾಜಿಕ ಒಗ್ಗಟ್ಟಿಗೆ ಜೀವಂತ ಸಾಕ್ಷಿಯಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಅತಿಥಿಗಳು, ಪ್ರಾಯೋಜಕರು, ಸಂಘ-ಸಂಸ್ಥೆಗಳು, ಕಲಾವಿದರು, ಸ್ಪರ್ಧಿಗಳು, ಪ್ರಶಸ್ತಿ ಪುರಸ್ಕೃತರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಸಾರ್ವಜನಿಕರಿಗೆ ಗದಗವಾಣಿ ಕುಟುಂಬ ಕೃತಜ್ಞತೆ ಸಲ್ಲಿಸಿತು.
“ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ವೇದಿಕೆಗಳು ಸಮಾಜಕ್ಕೆ ಹೊಸ ಚೈತನ್ಯ ಮತ್ತು ಪ್ರೇರಣೆ ನೀಡುತ್ತವೆ.”
ಕೃಷ್ಣಗೌಡ ಹೆಚ್. ಪಾಟೀಲ
ಅಧ್ಯಕ್ಷರು, ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ



