ಮುಂಬೈ: 2008ರ ನವೆಂಬರ್ 26ರಂದು ನಡೆದ ಭೀಕರ ಮುಂಬೈ ಉಗ್ರರ ದಾಳಿಯ ಸಮಯದಲ್ಲಿ ತಾವು ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ತೊಡಗಿಸಿಕೊಂಡಿದ್ದೆವು ಎಂದು ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಬಹಿರಂಗಪಡಿಸಿದ್ದಾರೆ. ‘ಭಾರತ್ ಭಾಗ್ಯ ವಿಧಾತ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶವನ್ನೇ ಬೆಚ್ಚಿಬೀಳಿಸಿದ್ದ ಆ ಕರಾಳ ರಾತ್ರಿಯ ನೆನಪುಗಳನ್ನು ಹಂಚಿಕೊಂಡರು.
ಕಂಗನಾ ಅವರ ಪ್ರಕಾರ, ನಟಿ ಶಹಾನಾ ಗೋಸ್ವಾಮಿ ಹೊಸ ಮನೆಗೆ ಗೃಹಪ್ರವೇಶ ಮಾಡಿಕೊಂಡ ಹಿನ್ನೆಲೆಯಲ್ಲಿ ಯಾರಿ ರೋಡ್ನಲ್ಲಿರುವ ನಿವಾಸದಲ್ಲಿ ವಿಶೇಷ್ ಫಿಲ್ಮ್ಸ್ಗೆ ಸಂಬಂಧಿಸಿದ ಕಲಾವಿದರಿಗಾಗಿ ಹೌಸ್ ಪಾರ್ಟಿ ಆಯೋಜಿಸಲಾಗಿತ್ತು. ಅಲ್ಲಿ ಎಲ್ಲರೂ ಹಾಡು, ನೃತ್ಯ ಮತ್ತು ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದರು.
ಈ ವೇಳೆ ಹಿರಿಯ ನಿರ್ದೇಶಕ ಮಹೇಶ್ ಭಟ್ ಪಾರ್ಟಿಗೆ ಆಗಮಿಸಿ ತಕ್ಷಣ ಟಿವಿ ಆನ್ ಮಾಡುವಂತೆ ಸೂಚಿಸಿದ್ದರು. ಟಿವಿ ತೆರೆದಾಗ ಮುಂಬೈನಲ್ಲಿ ಉಗ್ರರ ದಾಳಿ ನಡೆಯುತ್ತಿರುವ ದೃಶ್ಯಗಳು ನೇರ ಪ್ರಸಾರವಾಗುತ್ತಿದ್ದು, ಅಲ್ಲಿ ಇದ್ದವರು ಆಘಾತಕ್ಕೊಳಗಾದರು ಎಂದು ಕಂಗನಾ ತಿಳಿಸಿದ್ದಾರೆ.
ಆರಂಭದಲ್ಲಿ ಪರಿಸ್ಥಿತಿಯ ಗಂಭೀರತೆ ಅರ್ಥವಾಗದ ಕಾರಣ ಪಾರ್ಟಿ ಮುಂದುವರಿಸಬೇಕೇ ಅಥವಾ ಮನೆಗೆ ತೆರಳಬೇಕೇ ಎಂಬ ಚರ್ಚೆ ನಡೆದಿತ್ತು. ಆದರೆ ಮಹೇಶ್ ಭಟ್ ಪರಿಸ್ಥಿತಿಯ ತೀವ್ರತೆಯನ್ನು ಮನಗಂಡು ಎಲ್ಲರೂ ಕೂಡಲೇ ಮನೆಗೆ ತೆರಳುವಂತೆ ಸೂಚಿಸಿದರು. ಅವರ ಸಲಹೆಯಿಂದಲೇ ನಾವು ಅಲ್ಲಿಂದ ಹೊರಟೆವು ಎಂದು ಕಂಗನಾ ನೆನಪಿಸಿಕೊಂಡರು.
ಇದೇ ವೇಳೆ ತಮ್ಮ ಹೊಸ ಸಿನಿಮಾ ‘ಭಾರತ್ ಭಾಗ್ಯ ವಿಧಾತ’ ಕುರಿತು ಮಾತನಾಡಿದ ಅವರು, 26/11 ಉಗ್ರರ ದಾಳಿಯ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್ಗಳು ತೋರಿದ ಮಾನವೀಯತೆ ಮತ್ತು ಧೈರ್ಯದ ಕಥೆಯನ್ನು ಚಿತ್ರ ಹೇಳಲಿದೆ ಎಂದು ತಿಳಿಸಿದರು. ಚಿತ್ರದಲ್ಲಿ ಕಂಗನಾ ನರ್ಸ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.



