ಗದಗ: ಜಿಲ್ಲೆಯ ಹಲವೆಡೆ ಶುಕ್ರವಾರ ಗುಡುಗು-ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೂರು ಗ್ರಾಮದಲ್ಲಿ ಸಿಡಿಲು ಬಡಿದು 19 ವರ್ಷದ ಯುವಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ.
ಮೃತ ಯುವಕನನ್ನು ಪ್ರಶಾಂತ್ ಹುಡೇದ ಎಂದು ಗುರುತಿಸಲಾಗಿದೆ.
ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸಲು ಇಬ್ಬರು ಸಹೋದರರು ತೆರಳಿದ್ದ ವೇಳೆ ಏಕಾಏಕಿ ಗುಡುಗು-ಸಿಡಿಲು ಸಹಿತ ಮಳೆ ಆರಂಭವಾಗಿದೆ. ಈ ವೇಳೆ ಸುಮಾರು 60 ಮೀಟರ್ ದೂರದಲ್ಲಿದ್ದ ತಮ್ಮ ಪ್ರಶಾಂತ್ಗೆ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಅಣ್ಣನ ಕಣ್ಮುಂದೆಯೇ ತಮ್ಮ ಮೃತಪಟ್ಟ ದೃಶ್ಯ ಕಂಡು ಆತ ಬೆಚ್ಚಿಬಿದ್ದಿದ್ದು, ಬಳಿಕ ತಮ್ಮನ ಶವವನ್ನು ಹೊತ್ತುಕೊಂಡೇ ಊರಿಗೆ ಕರೆತಂದ ಘಟನೆ ಗ್ರಾಮಸ್ಥರ ಮನಕಲಕುವಂತಿತ್ತು.
ಘಟನೆ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.
ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



