ವಿಜಯಸಾಕ್ಷಿ ಸುದ್ದಿ, ಗದಗ: “ನಾವು ನಮ್ಮ ಮನೆಯನ್ನು ಮಾತ್ರ ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಸಾಲದು. ಸುತ್ತಮುತ್ತಲಿನ ಪರಿಸರವನ್ನೂ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು” ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಹೇಳಿದರು.
ಗದಗ-ಬೆಟಗೇರಿ ನಗರಸಭೆ ವತಿಯಿಂದ ನಗರದ ಸಿದ್ಧಲಿಂಗನಗರದ 15ನೇ ಸಂಖ್ಯೆಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹೊಸ ಘನತ್ಯಾಜ್ಯ ನಿರ್ವಹಣಾ ನಿಯಮ-2026 ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲೆಯ ಹೊರಾಂಗಣ ಗೋಡೆಗಳ ಮೇಲೆ ಚಿತ್ರ ಬಿಡಿಸುವ ಮೂಲಕ ಮಕ್ಕಳಿಗೆ ಸ್ವಚ್ಛತೆ, ಕಸ ವಿಂಗಡಣೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಅರಿವು ಮೂಡಿಸಲಾಯಿತು.
ಶಿಕ್ಷಣ ಸಂಯೋಜಕ ಮುರಳಿ ಸೊಲ್ಲಾಪೂರ ಮಾತನಾಡಿ, “ಶಾಲಾ ಮಕ್ಕಳಿಗೆ ಕಸ ವಿಲೇವಾರಿ, ಸ್ವಚ್ಛತೆ ಹಾಗೂ ಕಸ ವಿಂಗಡಣೆಯ ಕುರಿತು ಪ್ರಾಯೋಗಿಕ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರು ಮನೆಮಟ್ಟದಲ್ಲೇ ಕಸ ವಿಂಗಡಣೆ ಮಾಡಿ ಪೌರಕಾರ್ಮಿಕರ ಶ್ರಮಕ್ಕೆ ಸಹಕಾರ ನೀಡಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧಿಕಾರಿಗಳು, ಪರಿಸರ ಅಭಿಯಂತರರು, ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ, ಸೂಪರ್‌ವೈಸರ್‌ಗಳು, ಕಮ್ಯುನಿಟಿ ಮೊಬೈಲೈಸರ್‌ಗಳು, ಪೌರಕಾರ್ಮಿಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
“ಪರಿಸರ ಸ್ವಚ್ಛತೆಗೆ ಎಲ್ಲರೂ ಆದ್ಯತೆ ನೀಡಬೇಕು. ಮನೆ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಕಂಪೋಸ್ಟ್ ಮಾಡುವ ಮೂಲಕ ಕಸದಿಂದಲೂ ಸಂಪನ್ಮೂಲ ಸೃಷ್ಟಿಸಬಹುದು”
ಕವಿತಾ ದಂಡಿನ



