ಶಿವಮೊಗ್ಗ: ಶಿವಮೊಗ್ಗ-ಉಡುಪಿ ಗಡಿಭಾಗದ ಹುಲಿಕಲ್ ಘಾಟ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಖಾಸಗಿ ಬಸ್ ಹೊತ್ತಿ ಉರಿದ ಘಟನೆ ಆತಂಕ ಸೃಷ್ಟಿಸಿದೆ. ಬಸ್‌ನಲ್ಲಿದ್ದ 17 ಪ್ರಯಾಣಿಕರು ಸುರಕ್ಷಿತವಾಗಿ ಹೊರಬಂದಿರುವುದರಿಂದ ಸಂಭವನೀಯ ಭಾರಿ ದುರಂತ ತಪ್ಪಿದೆ.
ಮಾಸ್ತಿಕಟ್ಟೆ ಸಮೀಪ ಸಂಚರಿಸುತ್ತಿದ್ದ ವೇಳೆ ಬಸ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಚಾಲಕ ಮತ್ತು ನಿರ್ವಾಹಕ ತಕ್ಷಣ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಪ್ರಯಾಣಿಕರು ಇಳಿದ ಕೆಲವೇ ಹೊತ್ತಿನಲ್ಲಿ ಬೆಂಕಿ ಇಡೀ ಬಸ್ ಅನ್ನು ಆವರಿಸಿದ್ದು, ವಾಹನ ಸಂಪೂರ್ಣ ಸುಟ್ಟು ಹೋಗಿದೆ. ಘಟನೆಯ ದೃಶ್ಯ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಹುಲಿಕಲ್ ಘಾಟ್ ರಸ್ತೆಯ ಸಮಸ್ಯೆಯಿಂದ ಸಂಪರ್ಕ ಸಾರಿಗೆ ಸೇವೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಬಸ್ ಉಡುಪಿನತ್ತ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ಘಟನೆ ಕುರಿತು ನಗರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಅಗ್ನಿ ಅವಘಡಕ್ಕೆ ನಿಖರ ಕಾರಣ ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ. ಹುಲಿಕಲ್ ಘಾಟ್ ಮಾರ್ಗದಲ್ಲಿ ಕೆಲಕಾಲ ಸಂಚಾರ ವ್ಯತ್ಯಯವೂ ಉಂಟಾಯಿತು.



