ವಿಜಯಸಾಕ್ಷಿ ಸುದ್ದಿ, ಗದಗ: ಹುಟ್ಟುಹಬ್ಬವನ್ನು ವೈಭವವಾಗಿ ಆಚರಿಸುವ ಬದಲು ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾದ ಯುವಕನ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.
ಶಿರಹಟ್ಟಿ ತಾಲೂಕಿನ ಅಲಗಿಲವಾಡ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಾಹಿಲ್ ಮಾಬುಸಾಬ ನದಾಫ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕುಟುಂಬಸ್ಥರು ನೋಟ್‌ಪುಸ್ತಕ, ಪೆನ್ನು ಹಾಗೂ ಅಂಕಲಿಪಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಟುಂಬಸ್ಥರು, “ಸರ್ಕಾರಿ ಶಾಲೆಯಲ್ಲಿ ಅನೇಕ ಬಡ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಹುಟ್ಟುಹಬ್ಬಕ್ಕೆ ಅನಗತ್ಯ ಖರ್ಚು ಮಾಡುವ ಬದಲು ಮಕ್ಕಳಿಗೆ ಕಲಿಕಾ ಸಾಮಗ್ರಿ ನೀಡುವ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ನೆರವಾಗಬೇಕು ಎಂಬ ಆಶಯದಿಂದ ಈ ಕಾರ್ಯ ಮಾಡಿದ್ದೇವೆ,” ಎಂದು ಹೇಳಿದರು.
“ನಾವೂ ಸಹ ಬಡ ಕುಟುಂಬದಿಂದ ಬಂದವರೇ ಆಗಿದ್ದು, ಖರ್ಚು ಮಾಡುವ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಬಳಸುವುದು ಉತ್ತಮ ಎಂಬ ಭಾವನೆಯಿಂದ ನಮ್ಮ ಕೈಲಾದ ಅಳಿಲು ಸೇವೆ ಸಲ್ಲಿಸಿದ್ದೇವೆ,” ಎಂದು ತಿಳಿಸಿದರು.
ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರು ಈ ಕಾರ್ಯವನ್ನು ಶ್ಲಾಘಿಸಿದ್ದು, ಗ್ರಾಮದಲ್ಲಿನ ಹಳೆಯ ವಿದ್ಯಾರ್ಥಿಗಳು ಹಾಗೂ ಸಜ್ಜನರು ಕೂಡ ಶಿಕ್ಷಣ ಸೇವೆಗೆ ಮುಂದೆ ಬರಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಖಾದರ್‌ಭಾಷಾ ಮುಂಡರಗಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರೇಮಯ್ಯ ಬಾಳಿಹಳ್ಳಿಮಠ, ಪ್ರಧಾನಗುರು ಹಾಲೇಶ ಎಸ್. ಜಕ್ಕಲಿ, ಶಿಕ್ಷಕ ನೆಮೇಶ ಯರಗುಪ್ಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



