ಸಿನಿಮಾಗಳಿಂದ ದೂರವಿದ್ದು ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವ ನಟಿ ಅನುಷ್ಕಾ ಶರ್ಮಾ ಇದೀಗ ಆರೋಗ್ಯ ವಿಚಾರದಲ್ಲಿ ಮಾಡಿದ ಪೋಸ್ಟ್‌ನಿಂದ ಸುದ್ದಿಯಲ್ಲಿದ್ದಾರೆ. ಹೋಮಿಯೋಪತಿ ಚಿಕಿತ್ಸಾ ಪದ್ಧತಿಗೆ ಬೆಂಬಲ ಸೂಚಿಸಿದ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಅನುಷ್ಕಾ ಶರ್ಮಾ, ಹೋಮಿಯೋಪತಿ ವೈದ್ಯ ರಾಜನ್ ಸಂಕರನ್ ಅವರ ವಿಡಿಯೋವನ್ನು ಹಂಚಿಕೊಂಡು, ತಮ್ಮ ಆರೋಗ್ಯ ಜೀವನದಲ್ಲಿ ಹೋಮಿಯೋಪತಿಯ ಪಾತ್ರವನ್ನು ಶ್ಲಾಘಿಸಿದ್ದರು. ಆದರೆ ಈ ಹೇಳಿಕೆಗೆ ವೈದ್ಯಕೀಯ ಕ್ಷೇತ್ರದ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಖ್ಯಾತ ವೈದ್ಯ ಸಿರಿಯಾಕ್ ಅಬಿ ಫಿಲಿಪ್ಸ್, ಹೋಮಿಯೋಪತಿಯಲ್ಲಿ ಪರಿಣಾಮಕಾರಿ ಔಷಧೀಯ ಅಂಶಗಳಿಲ್ಲ ಎಂದು ವಾದಿಸಿದ್ದು, ಸಾರ್ವಜನಿಕ ವ್ಯಕ್ತಿಗಳು ವೈಜ್ಞಾನಿಕ ಆಧಾರವಿಲ್ಲದ ಚಿಕಿತ್ಸಾ ವಿಧಾನಗಳನ್ನು ಪ್ರಚಾರ ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದೆಡೆ, ಹೋಮಿಯೋಪತಿಯನ್ನು ನಂಬುವವರು ಅನುಷ್ಕಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈ ಬೆಳವಣಿಗೆಯೊಂದಿಗೆ ಹೋಮಿಯೋಪತಿ ವಿರುದ್ಧ ಆಧುನಿಕ ವೈದ್ಯಕೀಯ ಪದ್ಧತಿ ಕುರಿತ ಚರ್ಚೆ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಮುನ್ನೆಲೆಗೆ ಬಂದಿದೆ.



