ವಿಜಯಪುರ: ಪಾನ್ ಶಾಪ್‌ನಲ್ಲಿ ಸಂಭವಿಸಿದ ನಿಗೂಢ ಸ್ಫೋಟದಿಂದ ಅಂಗಡಿ ಮಾಲೀಕ ಸೇರಿ ಮೂವರು ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ನಡೆದಿದೆ.
ರವಿಕಿರಣ ಎಂಬುವವರಿಗೆ ಸೇರಿದ ಪಾನ್ ಶಾಪ್‌ನಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದ್ದು, ಸ್ಫೋಟದ ಶಬ್ದಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಘಟನೆಯ ವೇಳೆ ಅಂಗಡಿಯಲ್ಲಿ ಇದ್ದವರು ಗಾಯಗೊಂಡಿದ್ದಾರೆ.
ಪ್ರಾಥಮಿಕ ಪರಿಶೀಲನೆಯಲ್ಲಿ ಅಂಗಡಿಯೊಳಗಿದ್ದ ಫ್ರಿಡ್ಜ್ ಸೇರಿದಂತೆ ಕೆಲವು ವಸ್ತುಗಳಿಗೆ ಯಾವುದೇ ಹಾನಿಯಾಗದಿರುವುದು ಗಮನಕ್ಕೆ ಬಂದಿದ್ದು, ಸ್ಫೋಟವು ಹೊರಗಡೆಯಿಂದ ಸಂಭವಿಸಿರಬಹುದೆಂಬ ಅನುಮಾನ ಮೂಡಿಸಿದೆ.
ಸ್ಫೋಟದಲ್ಲಿ ಗಾಯಗೊಂಡ ರವಿಕಿರಣ ಹಾಗೂ ಇನ್ನಿಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಘಟನೆ ಕುರಿತು ಮಾಹಿತಿ ಪಡೆದ ಬಬಲೇಶ್ವರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ, ಸೊಕೋ ತಂಡ ಹಾಗೂ ಶ್ವಾನದಳದಿಂದ ಸ್ಥಳದಲ್ಲಿ ತಾಂತ್ರಿಕ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.



