ರಾಮನಗರ: ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಯುವಕನ ಮೇಲೆ ಮರ ಬಿದ್ದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಹುಣಸನಹಳ್ಳಿ ಗ್ರಾಮದ ಬಳಿ ನಡೆದಿದೆ.
ಮೃತ ಯುವಕನನ್ನು ಪ್ರಶಾಂತ್ (19) ಎಂದು ಗುರುತಿಸಲಾಗಿದೆ.
ಹುಣಸನಹಳ್ಳಿ ಗ್ರಾಮದ ಬಳಿ ಬೆಳಗ್ಗೆ ಸಂಭವಿಸಿದ ಈ ಘಟನೆಯಲ್ಲಿ, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವಕನ ಮೇಲೆ ರಸ್ತೆಯ ಪಕ್ಕದಲ್ಲಿದ್ದ ದೊಡ್ಡ ಮರವು ಏಕಾಏಕಿ ಬುಡಸಮೇತ ಉರುಳಿ ಬಿದ್ದಿದೆ. ಮಳೆ ಮತ್ತು ಗಾಳಿಯ ತೀವ್ರತೆಯಿಂದ ಮರ ಕುಸಿದಿರುವ ಸಾಧ್ಯತೆ ವ್ಯಕ್ತವಾಗಿದೆ.
ಘಟನೆಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂ ಆಗಿದ್ದು, ಯುವಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.



