ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆ ತೀವ್ರವಾಗಿರುವ ಹೊತ್ತಲ್ಲೇ, ರೋಣ ಕ್ಷೇತ್ರದ ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂಬ ಆಗ್ರಹ ಗದಗ ಜಿಲ್ಲೆಯಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸೋಮವಾರ ನಗರದಲ್ಲಿ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉರುಳು ಸೇವೆ, ದೀಡ್ ನಮಸ್ಕಾರ ಹಾಕುವ ಮೂಲಕ ಭಾರೀ ಶಕ್ತಿ ಪ್ರದರ್ಶನ ನಡೆಸಿ ಪಕ್ಷದ ಹೈಕಮಾಂಡ್ಗೆ ಸ್ಪಷ್ಟ ಸಂದೇಶ ರವಾನಿಸಿದರು.
ನಗರದ ಭೂಮರೆಡ್ಡಿ ವೃತ್ತದಲ್ಲಿರುವ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಆರಂಭವಾದ ಈ ವಿಶೇಷ ಹರಕೆ ಕಾರ್ಯಕ್ರಮ, ವೆಂಕಟೇಶ ಚಿತ್ರಮಂದಿರ, ಎಪಿಎಂಸಿ ಮಹಾದ್ವಾರ ಮಾರ್ಗವಾಗಿ ವೀರೇಶ್ವರ ಪುಣ್ಯಾಶ್ರಮದವರೆಗೆ ಸಾಗಿತು. ಸುಮಾರು ಒಂದು ಕಿಲೋಮೀಟರ್ಗೂ ಅಧಿಕ ದೂರ ನಡೆದ ಉರುಳು ಸೇವೆ ಹಾಗೂ ದೀಡ್ ನಮಸ್ಕಾರ ರಾಜಕೀಯ ವಲಯದಲ್ಲಿ ಗಮನ ಸೆಳೆಯಿತು.

ಸುಡುವ ಬಿಸಿಲಿನಲ್ಲೇ ಯುವ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯುದ್ದಕ್ಕೂ ಉರುಳು ಸೇವೆ ಸಲ್ಲಿಸಿದರೆ, ವೀರೇಶ್ವರ ಪುಣ್ಯಾಶ್ರಮದ ಮಹಾದ್ವಾರದಿಂದ ನೂರಾರು ಮಹಿಳಾ ಕಾರ್ಯಕರ್ತೆಯರು ಭಕ್ತಿಯಿಂದ ದೀಡ್ ನಮಸ್ಕಾರ ಹಾಕಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ಸಿಗಲೆಂದು ಪ್ರಾರ್ಥಿಸಿದರು.
ನಮ್ಮ ನಾಯಕರಿಗೆ ಸಚಿವ ಸ್ಥಾನ ಸಿಗುವವರೆಗೂ ನಾವು ವಿಶ್ರಮಿಸುವುದಿಲ್ಲ. ಅವರ ಹಿರಿಯತನ ಹಾಗೂ ಅನುಭವಕ್ಕೆ ಹೈಕಮಾಂಡ್ ಸೂಕ್ತ ಗೌರವ ನೀಡಬೇಕು ಎಂದು ಅಭಿಮಾನಿಗಳ ಹರಕೆ ಹೊತ್ತುಕೊಂಡರು.

ಪುಟ್ಟರಾಜರ ಗದ್ದುಗೆಗೆ ವಿಶೇಷ ಪೂಜೆ
ಉರುಳು ಸೇವೆ ಹಾಗೂ ದೀಡ್ ನಮಸ್ಕಾರದ ಬಳಿಕ ವೀರೇಶ್ವರ ಪುಣ್ಯಾಶ್ರಮದ ಸಭಾಂಗಣದಲ್ಲಿ ಡಾ. ಪುಟ್ಟರಾಜ ಗವಾಯಿಗಳ ಪವಿತ್ರ ಗದ್ದುಗೆಗೆ ವಿಶೇಷ ಅಭಿಷೇಕ ಹಾಗೂ ಮಹಾಪೂಜೆ ನೆರವೇರಿಸಲಾಯಿತು. ತಮ್ಮ ನಾಯಕನಿಗೆ ಸಚಿವ ಸ್ಥಾನ ದೊರಕುವವರೆಗೆ ಹೋರಾಟ ಮುಂದುವರಿಸುವ ಸಂಕಲ್ಪವನ್ನು ಕಾರ್ಯಕರ್ತರು ವ್ಯಕ್ತಪಡಿಸಿದರು.

ಈ ವಿಶೇಷ ಹರಕೆ ಕಾರ್ಯಕ್ರಮದಲ್ಲಿ ರೋಣ ವಿಧಾನಸಭಾ ಕ್ಷೇತ್ರದ ರೋಣ, ನರೇಗಲ್ಲ, ಗಜೇಂದ್ರಗಡ ಹಾಗೂ ಮುಂಡರಗಿ ಮಂಡಳಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಹಿರಿಯ ಮುಖಂಡರಾದ ವೀರಣ್ಣ ಶೆಟ್ಟರ, ಶರಣಪ್ಪ ಬೆಟಗೇರಿ, ಡಿ.ಡಿ. ಮೋರನಾಳ, ಸಿದ್ದಣ್ಣ ಬಂಡಿ, ಪ್ರಭು ಮೇಟಿ, ಪರಶುರಾಮ ಅಳಗವಾಡಿ, ಗೋಣಿ ಬಸಪ್ಪ ಕೊರ್ಲಹಳ್ಳಿ, ಎಚ್.ಎಸ್. ಸೋಂಪುರ ಸೇರಿದಂತೆ ಸಾವಿರಾರು ಅಭಿಮಾನಿಗಳು ಉಪಸ್ಥಿತರಿದ್ದರು.
“ಜಿ.ಎಸ್. ಪಾಟೀಲರು ಕೇವಲ ರೋಣ ಕ್ಷೇತ್ರದ ನಾಯಕ ಅಲ್ಲ. ಇಡೀ ಜಿಲ್ಲೆಯ ಜನಸಾಮಾನ್ಯರ ಧ್ವನಿಯಾಗಿದ್ದಾರೆ. ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ಸೌಮ್ಯ ಸ್ವಭಾವದ ಹಿರಿಯ ನಾಯಕರಿಗೆ ಸಚಿವ ಸ್ಥಾನ ನೀಡಬೇಕು”
ಅಪ್ಪು ಗಿರಡ್ಡಿ
ಶರಣಗೌಡ ಪಾಟೀಲ ಸರ್ಜಾಪೂರ
ಜಿಲ್ಲೆಯ ಏಕೈಕ ಲಿಂಗಾಯತ ಶಾಸಕ
ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ಸಿಕ್ಕರೆ ಗದಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ವೀರಶೈವ ಲಿಂಗಾಯತ ಸಮುದಾಯಕ್ಕೆ ರಾಜಕೀಯವಾಗಿ ದೊಡ್ಡ ಬಲ ಸಿಗಲಿದೆ ಎಂದು ಕಾರ್ಯಕರ್ತರು ಅಭಿಪ್ರಾಯಪಟ್ಟರು. ಜಿಲ್ಲೆಯ ವೀರಶೈವ ಲಿಂಗಾಯತ ಸಮುದಾಯದಿಂದ ಆಯ್ಕೆಯಾಗಿರುವ ಏಕೈಕ ಕಾಂಗ್ರೆಸ್ ಶಾಸಕರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯ ಕೇಳಿ ಬಂತು.



