ಮೈಸೂರು: ಅಧಿಕ ಮಾಸದ ಅಂಗವಾಗಿ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಲಲಿತಾ ಪರಮೇಶ್ವರಿ ಅಮ್ಮನವರ ಹರಿದ್ರಾ ಅರ್ಚನೆ ಹಾಗೂ ರುದ್ರಾಭಿಷೇಕ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು. ಪರಮಪೂಜ್ಯ ಶ್ರೀ ವೆಂಕಟಾಚಲ ಅವಧೂತ ಗುರುಮಹಾರಾಜರ ಆಶೀರ್ವಾದದೊಂದಿಗೆ ಶ್ರೀ ಅರ್ಜುನ ಅವಧೂತರು ವಿಶೇಷ ಪೂಜಾ ಕೈಂಕರ್ಯ ನಡೆಸಿದರು.
ಲೋಕಕಲ್ಯಾಣ, ಉತ್ತಮ ಮಳೆ-ಬೆಳೆ ಹಾಗೂ ವಿಶ್ವಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಗುರುಗಳ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಸಾಲಿಗ್ರಾಮ, ಮಂತ್ರಾಕ್ಷತೆ, ದೇವಿಗೆ ಅರ್ಚನೆ ಮಾಡಿದ ಅರಿಶಿನ ಹಾಗೂ ತಿರುಪತಿ ಲಾಡು ಪ್ರಸಾದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾರತ ಅಂಡರ್-19 ಕ್ರಿಕೆಟ್ ತಂಡದ ನಾಯಕ ಆಯುಷ್ ಮಾತ್ರೆ ಭಾಗವಹಿಸಿ ಅರ್ಜುನ ಗುರೂಜಿಯ ಆಶೀರ್ವಾದ ಪಡೆದರು. ಕನ್ನಡ ಚಿತ್ರರಂಗ, ಕಿರುತೆರೆ ಕ್ಷೇತ್ರದ ಕಲಾವಿದರು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಸಹ ಉಪಸ್ಥಿತರಿದ್ದರು.
ಅಧಿಕ ಮಾಸವು ಪೂಜೆ, ಜಪ, ತಪ, ದಾನ-ಧರ್ಮಗಳಿಗೆ ಅತ್ಯಂತ ಪವಿತ್ರವಾದ ಮಾಸವಾಗಿದ್ದು, ಪ್ರತಿ 33 ತಿಂಗಳಿಗೊಮ್ಮೆ ಬರುತ್ತದೆ. ಪರಮಪೂಜ್ಯ ಶ್ರೀ ವೆಂಕಟಾಚಲ ಅವಧೂತರು ಅಧಿಕ ಜೇಷ್ಠ ಮಾಸದಲ್ಲಿ ಜನಿಸಿದ್ದು ಈ ಆಚರಣೆಗೆ ಮತ್ತಷ್ಟು ವಿಶೇಷತೆ ತಂದಿದೆ ಎಂದು ಭಕ್ತರು ಅಭಿಪ್ರಾಯಪಟ್ಟರು.



