ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕಾರದ ಬೆನ್ನಲ್ಲೇ ರಾಜ್ಯದ ಹಿರಿಯ ರಾಜಕೀಯ ನಾಯಕರೊಂದಿಗೆ ಸಮಾಲೋಚನೆ ಆರಂಭಿಸಿದ್ದಾರೆ. ಇದರ ಭಾಗವಾಗಿ ಮಾಜಿ ಮುಖ್ಯಮಂತ್ರಿಗಳಾದ ಎಸ್. ಸದಾನಂದ ಗೌಡ, ಜಗದೀಶ್ ಶೆಟ್ಟರ್ ಹಾಗೂ ಎಂ. ವಿರಪ್ಪ ಮೊಯ್ಲಿ ಅವರ ನಿವಾಸಗಳಿಗೆ ಭೇಟಿ ನೀಡಿ ರಾಜ್ಯದ ಅಭಿವೃದ್ಧಿ ಮತ್ತು ಆಡಳಿತ ಸುಧಾರಣೆ ಕುರಿತು ಚರ್ಚೆ ನಡೆಸಿದರು.
ಭೇಟಿ ಬಳಿಕ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಸ್. ಸದಾನಂದ ಗೌಡ, “ಹಿಂದಿನ ಮುಖ್ಯಮಂತ್ರಿಗಳನ್ನು ಹಾಲಿ ಸಿಎಂ ಭೇಟಿ ಮಾಡುವುದು ಉತ್ತಮ ರಾಜಕೀಯ ಸಂಪ್ರದಾಯ. ಇದರಿಂದ ದ್ವೇಷ ರಾಜಕಾರಣ ಕಡಿಮೆಯಾಗುತ್ತದೆ. ಆದರೆ ಇದನ್ನು ನಾನು ಡಿ.ಕೆ. ಶಿವಕುಮಾರ್ ಅವರಿಗೆ ಬೆಂಬಲ ನೀಡಿದ್ದೇನೆ ಎಂದು ಅರ್ಥೈಸಬಾರದು” ಎಂದು ಸ್ಪಷ್ಟಪಡಿಸಿದರು.
ಸುಮಾರು ಅರ್ಧ ಗಂಟೆ ನಡೆದ ಮಾತುಕತೆಯಲ್ಲಿ ಆಡಳಿತಕ್ಕೆ ಸಂಬಂಧಿಸಿದ ಹಲವು ಸಲಹೆಗಳನ್ನು ನೀಡಿದ್ದಾಗಿ ತಿಳಿಸಿದ ಅವರು, ಮಳೆಗಾಲದ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಆದ್ಯತೆ ನೀಡಬೇಕು, ಸರ್ಕಾರಿ ಸೇವೆಗಳು ಜನರ ಮನೆಬಾಗಿಲಿಗೆ ತಲುಪುವ ವ್ಯವಸ್ಥೆ ಬಲಪಡಿಸಬೇಕು ಹಾಗೂ ಕಂದಾಯ ಇಲಾಖೆಯ ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇದಲ್ಲದೆ ತಮ್ಮ ಅವಧಿಯಲ್ಲಿ ಜಾರಿಯಾಗಿದ್ದ ‘ಸಕಾಲ’ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಿದರೆ ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಸೇವೆಗಳು ದೊರೆಯುತ್ತವೆ ಎಂದು ಮುಖ್ಯಮಂತ್ರಿ ಗಮನಕ್ಕೆ ತಂದಿರುವುದಾಗಿ ಹೇಳಿದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಹಾಗೂ ವಿರಪ್ಪ ಮೊಯ್ಲಿ ಅವರ ನಿವಾಸಗಳಿಗೂ ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ರಾಜ್ಯದ ಅಭಿವೃದ್ಧಿ ಯೋಜನೆಗಳು, ಆಡಳಿತದ ಆದ್ಯತೆಗಳು ಹಾಗೂ ಭವಿಷ್ಯದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿದರು. ಇದಕ್ಕೂ ಮೊದಲು ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.



