ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ.
ಈಗಾಗಲೇ ದುಬಾರಿಯಾಗಿರುವ ಮೆಟ್ರೋ ಪ್ರಯಾಣ ದರವನ್ನು ಮತ್ತಷ್ಟು ಹೆಚ್ಚಿಸುವ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹೊಸ ಲೆಕ್ಕಾಚಾರ ನಡೆಸುತ್ತಿದೆ ಎನ್ನಲಾಗಿದೆ.
ಮೆಟ್ರೋ ಹಂತ-3ಎ (Phase 3A) ಯೋಜನೆಗಾಗಿ ಸಿದ್ಧಪಡಿಸಲಾಗಿರುವ ಪರಿಷ್ಕೃತ ಸಮಗ್ರ ಯೋಜನಾ ವರದಿ (DPR)ಯಲ್ಲಿ ಮುಂದಿನ ವರ್ಷಗಳಲ್ಲಿ ದರ ಪರಿಷ್ಕರಣೆಗೆ ಹೊಸ ಸೂತ್ರವನ್ನು ಪ್ರಸ್ತಾಪಿಸಲಾಗಿದೆ. ಇದರ ಪ್ರಕಾರ ಪ್ರತಿ ವರ್ಷ ದರ ಹೆಚ್ಚಿಸುವ ಬದಲು, ಮೂರು ವರ್ಷಕ್ಕೊಮ್ಮೆ ಒಟ್ಟಿಗೆ ಶೇ.12ರಷ್ಟು ದರ ಹೆಚ್ಚಳ ಮಾಡುವ ಪ್ರಸ್ತಾವನೆ ಮಾಡಲಾಗಿದೆ.
ಪ್ರಸ್ತುತ ಜಾರಿಯಲ್ಲಿರುವ ವಾರ್ಷಿಕ ದರ ಹೆಚ್ಚಳದ ನಿಯಮಗಳ ನಡುವೆ BMRCL ಮುಂದಿಟ್ಟಿರುವ ಈ ಹೊಸ ಪ್ರಸ್ತಾವನೆ ಪ್ರಯಾಣಿಕರಲ್ಲಿ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರು ಮೆಟ್ರೋ ದೇಶದ ದುಬಾರಿ ಮೆಟ್ರೋ ಸೇವೆಗಳಲ್ಲಿ ಒಂದಾಗಿದೆ. 2025ರ ಫೆಬ್ರವರಿಯಲ್ಲಿ ಮೆಟ್ರೋ ಟಿಕೆಟ್ ದರವನ್ನು ಸರಾಸರಿ ಶೇ.51.55ರಷ್ಟು ಹೆಚ್ಚಿಸಲಾಗಿತ್ತು. ದರ ಏರಿಕೆಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಳಿಕ BMRCL ಶೇ.5ರಷ್ಟು ದರ ಕಡಿತ ಮಾಡಿತ್ತು. ಆದರೂ ಪ್ರಯಾಣಿಕರ ಮೇಲಿನ ಹೊರೆ ಕಡಿಮೆಯಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಇದೀಗ ಹೊಸ DPRನಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಪ್ರಯಾಣ ದರವನ್ನು ಶೇ.12ರಷ್ಟು ಹೆಚ್ಚಿಸುವ ಕುರಿತು ಸಮಿತಿ ಶಿಫಾರಸು ಮಾಡಿದೆ. ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ BMRCL ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿರುವ ಪರಿಷ್ಕೃತ ಯೋಜನಾ ವರದಿಯಲ್ಲಿ ಈ ದರ ಪರಿಷ್ಕರಣೆ ಪ್ರಸ್ತಾಪವನ್ನು ಉಲ್ಲೇಖಿಸಲಾಗಿದೆ. ಮೆಟ್ರೋ ಹಂತ-3ಎ ಕಾಮಗಾರಿಯನ್ನು 2033ರೊಳಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ.
ದರ ಏರಿಕೆ ಜಾರಿಯಾದರೆ ಬೆಂಗಳೂರಿನ ಲಕ್ಷಾಂತರ ನಿತ್ಯ ಮೆಟ್ರೋ ಪ್ರಯಾಣಿಕರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.



