HomeGadag Newsರೈತರು, ಬಡವರು ಮತ್ತು ಮಹಿಳೆಯರಿಗೆ ಬ್ಯಾಂಕುಗಳು ಹೆಚ್ಚು ನೆರವಾಗಲಿ: ಬೊಮ್ಮಾಯಿ

ರೈತರು, ಬಡವರು ಮತ್ತು ಮಹಿಳೆಯರಿಗೆ ಬ್ಯಾಂಕುಗಳು ಹೆಚ್ಚು ನೆರವಾಗಲಿ: ಬೊಮ್ಮಾಯಿ

For Dai;y Updates Join Our whatsapp Group

Spread the love

ಗದಗ: ಬ್ಯಾಂಕಿಂಗ್ ಸೇವೆಗಳು ಕೇವಲ ಹಣಕಾಸು ವ್ಯವಹಾರಗಳಿಗೆ ಸೀಮಿತವಾಗದೇ ಸಮಾಜದ ಕಟ್ಟಕಡೆಯ ವ್ಯಕ್ತಿಯ ಆರ್ಥಿಕ ಅಭಿವೃದ್ಧಿಗೆ ನೆರವಾಗಬೇಕು. ರೈತರು, ದಲಿತರು, ಹಿಂದುಳಿದ ವರ್ಗದವರು ಹಾಗೂ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ಒದಗಿಸುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಬ್ಯಾಂಕುಗಳಿಗೆ ಕರೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆ (ಡಿಎಲ್‌ಆರ್‌ಸಿ) ಹಾಗೂ ಜಿಲ್ಲಾ ಮಟ್ಟದ ಬ್ಯಾಂಕುಗಳ ಸಲಹಾ ಸಮಿತಿ (ಡಿಸಿಸಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ಯಾಂಕಿಂಗ್ ಜಿಲ್ಲೆಯನ್ನಾಗಿ ರೂಪಿಸುವ ಗುರಿಯೊಂದಿಗೆ ಬ್ಯಾಂಕುಗಳು ಬಡವರು, ರೈತರು, ಮಹಿಳೆಯರು ಹಾಗೂ ಜನಸಾಮಾನ್ಯರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ರೈತರ ಅಭಿವೃದ್ಧಿಯೇ ದೇಶದ ಆರ್ಥಿಕತೆಯ ಮೂಲಾಧಾರವಾಗಿದ್ದು, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ ಎಂದು ಬೊಮ್ಮಾಯಿ ತಿಳಿಸಿದರು.

ರಾಜ್ಯ ಸರ್ಕಾರ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ನೀಡುತ್ತಿದ್ದರೂ ಎಲ್ಲ ರೈತರಿಗೆ ಅದರ ಸೌಲಭ್ಯ ದೊರೆಯುವುದಿಲ್ಲ. ಹೀಗಾಗಿ ರಾಷ್ಟ್ರೀಕೃತ ಬ್ಯಾಂಕುಗಳು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಸಾಲ ವಿತರಿಸಿ ರೈತರನ್ನು ಬೆಂಬಲಿಸಬೇಕು ಎಂದು ಸೂಚಿಸಿದರು.

ಕೃಷಿ ಕ್ಷೇತ್ರದಲ್ಲಿ ಒಂದು ಶೇಕಡಾ ಅಭಿವೃದ್ಧಿಯಾದರೆ ಉತ್ಪಾದನಾ ಕ್ಷೇತ್ರದಲ್ಲಿ ನಾಲ್ಕು ಶೇಕಡಾ ಮತ್ತು ಸೇವಾ ಕ್ಷೇತ್ರದಲ್ಲಿ ಹತ್ತು ಶೇಕಡಾ ಬೆಳವಣಿಗೆ ಸಾಧ್ಯವಾಗುತ್ತದೆ. ರೈತ ಕೇವಲ ಉತ್ಪಾದಕನಲ್ಲ, ಆತ ದೊಡ್ಡ ಗ್ರಾಹಕನೂ ಆಗಿದ್ದಾನೆ. ರೈತರ ಕೊಳ್ಳುವ ಶಕ್ತಿ ಹೆಚ್ಚಿದಾಗ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ವಿಸ್ತಾರವಾಗುತ್ತವೆ. ಆದ್ದರಿಂದ ಬ್ಯಾಂಕುಗಳು ರೈತರನ್ನು ತಲುಪಿ ಅಗತ್ಯ ಸಾಲ ಸೌಲಭ್ಯ ಒದಗಿಸಬೇಕು ಎಂದು ಹೇಳಿದರು.

ಸರ್ಕಾರದ ದೃಷ್ಟಿಯಿಂದ ರೈತರು, ದಲಿತರು, ಹಿಂದುಳಿದ ವರ್ಗದವರು ಹಾಗೂ ಆರ್ಥಿಕವಾಗಿ ದುರ್ಬಲ ಸಮುದಾಯಗಳು ಆದ್ಯತೆಯ ವಲಯಗಳಾಗಿದ್ದು, ಬ್ಯಾಂಕುಗಳು ಇವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಮತ್ತು ಹಣಕಾಸು ನೆರವು ನೀಡುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕುಗಳ ಪಾತ್ರ ಮಹತ್ವದ್ದಾಗಿದೆ. ಸ್ವಸಹಾಯ ಸಂಘಗಳು, ಮಹಿಳಾ ಗುಂಪುಗಳು, ಸಣ್ಣ ಕೈಗಾರಿಕೆಗಳು ಹಾಗೂ ಯುವ ಉದ್ಯಮಿಗಳನ್ನು ಗುರುತಿಸಿ ಅವರಿಗೆ ಅಗತ್ಯ ಸಾಲ ಸೌಲಭ್ಯ ಒದಗಿಸಬೇಕು. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಬ್ಯಾಂಕುಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಅವರು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳ ವಿಸ್ತರಣೆ ಅಗತ್ಯವಾಗಿದ್ದು, ರಾಷ್ಟ್ರೀಕೃತ ಬ್ಯಾಂಕುಗಳು ಹೊಸ ಶಾಖೆಗಳನ್ನು ಆರಂಭಿಸುವ ಮೂಲಕ ಗ್ರಾಮೀಣ ಜನತೆಗೆ ಸುಲಭವಾಗಿ ಸೇವೆ ಒದಗಿಸಬೇಕು. ಜೊತೆಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮುದ್ರಾ ಯೋಜನೆಯಡಿ ಹೆಚ್ಚಿನ ಸಾಲ ವಿತರಣೆ ಮಾಡಿ ಯುವ ಉದ್ಯಮಿಗಳಿಗೆ ಉತ್ತೇಜನ ನೀಡಬೇಕು ಎಂದು ಸಂಸದರು ಸೂಚಿಸಿದರು.

ಬ್ಯಾಂಕುಗಳು ದೇಶದ ಆರ್ಥಿಕತೆ ಬಲವರ್ದನೆ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಬ್ಯಾಂಕಿಂಗ್ ವ್ಯವಸ್ಥೆ ಸಮರ್ಥವಾಗಿ ಕಾರ್ಯನಿರ್ವಹಿಸಿದರೆ ಪ್ರಸ್ತುತ ಶೇಕಡಾ ಆರರಿಂದ ಏಳುರಷ್ಟಿರುವ ಬಂಡವಾಳ ಹೂಡಿಕೆಯನ್ನು ಶೇಕಡಾ ಹತ್ತರ ಮಟ್ಟಕ್ಕೆ ಏರಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಬ್ಯಾಂಕುಗಳಿಗೆ ಹಲವು ನಿರ್ದೇಶನಗಳನ್ನು ನೀಡಿದ ಸಂಸದ ಬೊಮ್ಮಾಯಿ, ಅರ್ಹ ರೈತರಿಗೆ ಬೆಳೆಹಾನಿ ಪರಿಹಾರ ಹಾಗೂ ಸಾಲ ಸೌಲಭ್ಯಗಳು ಸಮರ್ಪಕವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದರು. ಕೌಶಲ್ಯಾಭಿವೃದ್ಧಿ ಇಲಾಖೆಯ ಮೂಲಕ ವಿಶ್ವಕರ್ಮ ಸಮುದಾಯದ ಯುವಕರಿಗೆ ತರಬೇತಿ ಒದಗಿಸಿ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಬೀದಿಬದಿ ವ್ಯಾಪಾರಸ್ಥರು ಮತ್ತು ಸಣ್ಣ ವ್ಯಾಪಾರಿಗಳಿಗೆ ಬ್ಯಾಂಕಿಂಗ್ ಸೇವೆಗಳು ಹಾಗೂ ಸಾಲ ಸೌಲಭ್ಯಗಳು ಸುಲಭವಾಗಿ ದೊರೆಯಬೇಕು. ಅವರಿಗೆ ಕ್ರೆಡಿಟ್ ಕಾರ್ಡ್ ಸೇರಿದಂತೆ ವಿವಿಧ ಹಣಕಾಸು ಸೌಲಭ್ಯಗಳನ್ನು ಒದಗಿಸುವ ಮೂಲಕ ಜೀವನಮಟ್ಟ ಸುಧಾರಣೆಗೆ ಸಹಕಾರಿಯಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಎಲ್ಲಾ ಬ್ಯಾಂಕುಗಳು ಪ್ರಾದೇಶಿಕ ಅಸಮತೋಲನ ನಿವಾರಣೆಯತ್ತ ಗಮನ ಹರಿಸಿ ಬಡವರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಪ್ರತಿದಿನ ದುಡಿದು ಬದುಕುವ ಸಾಮಾನ್ಯ ಜನರು ಹೆಚ್ಚಿನ ಪ್ರಮಾಣದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ವ್ಯಾಪ್ತಿಗೆ ಬರಬೇಕು. ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯೊಂದಿಗೆ ಹೊಂದಾಣಿಕೆ ಸಾಧಿಸಿ ಬ್ಯಾಂಕುಗಳು ಅಭಿವೃದ್ಧಿಯತ್ತ ಸಾಗಬೇಕು. ಸಮಗ್ರ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಿದರೆ ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿಗೆ ಬ್ಯಾಂಕಿಂಗ್ ಕ್ಷೇತ್ರ ಮಹತ್ತರ ಕೊಡುಗೆ ನೀಡಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕೃಷಿ ಕ್ಷೇತ್ರದ ಬೆಳವಣಿಗೆಯೇ ದೇಶದ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಅಡಿಪಾಯವಾಗಿದ್ದು, ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಸಾಲ ವಿತರಿಸುವ ಮೂಲಕ ಅವರ ಕೊಳ್ಳುವ ಶಕ್ತಿ ಹೆಚ್ಚಿಸಲು ಬ್ಯಾಂಕುಗಳು ಮುಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಬ್ಯಾಂಕುಗಳಿಗೆ ಕರೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಂತೋಷ್ ಎಂ.ವಿ. ಅವರು 2025-26ನೇ ಸಾಲಿನ ನಾಲ್ಕನೇ ತ್ರೈಮಾಸಿಕದ (31-03-2026ರ ಅಂತ್ಯದವರೆಗೆ) ಬ್ಯಾಂಕಿಂಗ್ ಪ್ರಗತಿ ವರದಿಯನ್ನು ಮಂಡಿಸಿದರು.

ಮಾರ್ಚ್ 2026ರ ತ್ರೈಮಾಸಿಕ ಅಂತ್ಯದ ವೇಳೆಗೆ ಒಟ್ಟಾರೆ ಆದ್ಯತಾ ವಲಯದ ಸಾಲ ವಿತರಣೆಯಲ್ಲಿ ಜಿಲ್ಲೆ ಶೇ. 98.73ರಷ್ಟು ಗುರಿ ಸಾಧನೆ ಮಾಡಿದೆ. ಕೃಷಿ ವಲಯದಲ್ಲಿ ಶೇ. 99.54, ಎಂಎಸ್‌ಎಂಇ ವಲಯದಲ್ಲಿ ಶೇ. 93.72, ಶಿಕ್ಷಣ ವಲಯದಲ್ಲಿ ಶೇ. 100.03, ವಸತಿ ವಲಯದಲ್ಲಿ ಶೇ. 89.22 ಹಾಗೂ ಇತರೆ ವಲಯಗಳಲ್ಲಿ ಶೇ. 105.67ರಷ್ಟು ಪ್ರಗತಿ ದಾಖಲಾಗಿದೆ ಎಂದು ವಿವರಿಸಿದರು.

ಗದಗ ಜಿಲ್ಲೆಯ ತಾಲೂಕುವಾರು ಆದ್ಯತಾ ವಲಯದ ಗುರಿ ಸಾಧನೆ ಕುರಿತು ಮಾಹಿತಿ ನೀಡಿದ ಅವರು, ಗದಗ ತಾಲೂಕಿನಲ್ಲಿ ಶೇ. 93.93, ಗಜೇಂದ್ರಗಡದಲ್ಲಿ ಶೇ. 107.54, ಲಕ್ಷ್ಮೇಶ್ವರದಲ್ಲಿ ಶೇ. 156.32, ಮುಂಡರಗಿಯಲ್ಲಿ ಶೇ. 96.67, ನರಗುಂದದಲ್ಲಿ ಶೇ. 110.26, ರೋಣದಲ್ಲಿ ಶೇ. 95.39 ಹಾಗೂ ಶಿರಹಟ್ಟಿಯಲ್ಲಿ ಶೇ. 78.12ರಷ್ಟು ಗುರಿ ಸಾಧನೆಯಾಗಿದೆ ಎಂದು ತಿಳಿಸಿದರು.

ಮಾರ್ಚ್ 2026ರ ತ್ರೈಮಾಸಿಕ ಅಂತ್ಯದ ವೇಳೆಗೆ ಆದ್ಯತಾ ವಲಯದ ಸಾಲ ವಿತರಣೆಯಲ್ಲಿ ಇತರೆ ವಾಣಿಜ್ಯ ಬ್ಯಾಂಕುಗಳು ಶೇ. 86.96, ಪ್ರಮುಖ ಬ್ಯಾಂಕುಗಳಾದ ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬ್ಯಾಂಕ್ ಆಫ್ ಬರೋಡಾ ಒಟ್ಟಾಗಿ ಶೇ. 105.03, ಇತರೆ ರಾಷ್ಟ್ರೀಕೃತ ಬ್ಯಾಂಕುಗಳು ಶೇ. 131.20, ಕರ್ನಾಟಕ ಗ್ರಾಮೀಣ ಬ್ಯಾಂಕ್ ಶೇ. 88.61 ಹಾಗೂ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು ಶೇ. 129.28ರಷ್ಟು ಸಾಧನೆ ಮಾಡಿವೆ ಎಂದು ಸಭೆಗೆ ವಿವರಿಸಿದರು.

ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಈರವರೆಗೆ ಒಟ್ಟು 7,093 ಅರ್ಜಿಗಳು ಮಂಜೂರಾಗಿದ್ದು, ಅವುಗಳಲ್ಲಿ 6,944 ಫಲಾನುಭವಿಗಳಿಗೆ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಯೋಜನೆ, PMFME, PMEGP, ಅಟಲ್ ಪಿಂಚಣಿ ಯೋಜನೆ (APY), ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಹಾಗೂ ಪ್ರಧಾನಮಂತ್ರಿ ಜನಧನ್ ಯೋಜನೆ (PMJDY) ಸೇರಿದಂತೆ ವಿವಿಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಪ್ರಗತಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಅಲ್ಲದೇ ಸಭೆಯಲ್ಲಿ ಜಿಲ್ಲೆಯ ಬ್ಯಾಂಕಿಂಗ್ ಪ್ರಗತಿ, ಸಾಲ ವಿತರಣೆ, ಸ್ವಸಹಾಯ ಸಂಘಗಳ ಹಣಕಾಸು ಸ್ಥಿತಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು.

ಈ ಸಂಧರ್ಭದಲ್ಲಿ ನರಗುಂದ‌ ಶಾಸಕ ಸಿ ಸಿ ಪಾಟೀಲ್, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಿ ಎನ್ ಶ್ರೀಧರ್, ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಸಿ ಆರ್ ಮುಂಡರಗಿ, ಆರ್, ಆರ್.ಬಿ.ಐ ಅಧಿಕಾರಿ ವಿಜಯಶ್ರೀ, ನಬಾರ್ಡನ ಎ ಜಿ ಎಂ ಹನುಮಂತರಾಜು, ಎಸ್.ಬಿ.ಐನ ರಿಜಿನಲ್ ಮ್ಯಾನೇಜರ ರಾಘವೇಂದ್ರ ರಾವ್, ಲೀಡ್ ಬ್ಯಾಂಕಿನ ಮ್ಯಾನೇಜರ ಸಂತೋಷಕುಮಾರ ಸೇರಿದಂತೆ ಬ್ಯಾಂಕಿನ ಹಿರಿಯ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!