ಚಿಕ್ಕಮಗಳೂರು: ಸರ್ಕಾರಿ ಮೆಡಿಕಲ್ ಕಾಲೇಜಿನ ಬಾಲಕಿಯರ ಹಾಸ್ಟೆಲ್‌ನಲ್ಲಿ ಮತ್ತೊಮ್ಮೆ ಭದ್ರತಾ ಲೋಪ ಬಯಲಾಗಿದ್ದು, ಮಧ್ಯರಾತ್ರಿ ಯುವಕನೊಬ್ಬ ವಸತಿ ನಿಲಯಕ್ಕೆ ನುಗ್ಗಿದ ಘಟನೆ ವಿದ್ಯಾರ್ಥಿನಿಯರಲ್ಲಿ ಭೀತಿ ಮೂಡಿಸಿದೆ. ಪ್ರಕರಣ ಸಂಬಂಧ ಉತ್ತರ ಪ್ರದೇಶದ ರಾಕೇಶ್ (30) ಎಂಬಾತನನ್ನು ಬಂಧಿಸಲಾಗಿದೆ.
ಭಾನುವಾರ ರಾತ್ರಿ ನಡೆದ ಘಟನೆಯಲ್ಲಿ ಹಾಸ್ಟೆಲ್ ಒಳಗೆ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ವಿದ್ಯಾರ್ಥಿನಿಯರು ಗುರುತಿಸಿದ್ದಾರೆ. ಆತನನ್ನು ಪ್ರಶ್ನಿಸಿದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದರೂ, ವಿದ್ಯಾರ್ಥಿನಿಯರೇ ಧೈರ್ಯ ತೋರಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ರಾಕೇಶ್ ಮೆಡಿಕಲ್ ಕಾಲೇಜಿನ ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಾಗಿದ್ದು, ಈ ಹಿಂದೆಯೂ ಹಾಸ್ಟೆಲ್ ಆವರಣಕ್ಕೆ ನುಗ್ಗಿದ್ದ ಮಾಹಿತಿ ತನಿಖೆಯಲ್ಲಿ ಪತ್ತೆಯಾಗಿದೆ. ಹೀಗಿದ್ದರೂ ಸೂಕ್ತ ಭದ್ರತಾ ಕ್ರಮ ಕೈಗೊಳ್ಳದ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿನಿಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿಯರ ಸುರಕ್ಷತೆ ಪ್ರಶ್ನಾರ್ಥಕವಾಗಿರುವ ಹಿನ್ನೆಲೆಯಲ್ಲಿ ಕಾಲೇಜು ಡೀನ್ ಪೊಲೀಸರಿಗೆ ದೂರು ನೀಡಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ವಿಚಾರಣೆ ವೇಳೆ ಕಳ್ಳತನದ ಉದ್ದೇಶದಿಂದ ಹಾಸ್ಟೆಲ್‌ಗೆ ತೆರಳಿದ್ದಾಗಿ ಆರೋಪಿ ಹೇಳಿಕೊಂಡಿದ್ದರೂ, ಆತ ಹಾಸ್ಟೆಲ್‌ಗೆ ಏಕೆ ಪದೇ ಪದೇ ಪ್ರವೇಶಿಸುತ್ತಿದ್ದ ಎಂಬುದರ ಕುರಿತು ಪೊಲೀಸರು ಆಳವಾದ ತನಿಖೆ ನಡೆಸುತ್ತಿದ್ದಾರೆ.
ಘಟನೆಯ ಬಳಿಕ ಮೆಡಿಕಲ್ ಕಾಲೇಜು ಹಾಸ್ಟೆಲ್‌ಗಳ ಭದ್ರತೆ ಮತ್ತು ವಿದ್ಯಾರ್ಥಿನಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೆ ತೀವ್ರಗೊಂಡಿದೆ.



