ಹಾಸನ: ಮುಂಗಾರು ಆರಂಭವಾದರೂ ಮಳೆಯ ಕೊರತೆಯಿಂದ ಹೇಮಾವತಿ ಜಲಾಶಯದಲ್ಲಿ ನೀರಿನ ಸಂಗ್ರಹ ತೀವ್ರವಾಗಿ ಕುಸಿದಿದ್ದು, ಹಾಸನ ಸೇರಿದಂತೆ ನಾಲ್ಕು ಜಿಲ್ಲೆಗಳ ರೈತರಲ್ಲಿ ಆತಂಕ ಮನೆ ಮಾಡಿದೆ. ಜಲಾಶಯದಲ್ಲಿ ಸದ್ಯ 14.552 ಟಿಎಂಸಿ ನೀರು ಇದ್ದರೂ, ಬಳಕೆಗೆ ಲಭ್ಯವಿರುವುದು ಕೇವಲ 10.185 ಟಿಎಂಸಿ ಮಾತ್ರ.
37.105 ಟಿಎಂಸಿ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ 4.372 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿರುವುದರಿಂದ ನೀರಿನ ಲಭ್ಯತೆ ಮತ್ತಷ್ಟು ಸೀಮಿತವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 24.482 ಟಿಎಂಸಿ ನೀರು ಸಂಗ್ರಹವಾಗಿದ್ದರೆ, ಈ ಬಾರಿ ಆ ಪ್ರಮಾಣ ಅರ್ಧಕ್ಕಿಂತಲೂ ಕಡಿಮೆಯಾಗಿದೆ.
ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹೇಮಾವತಿ, ಹಾಸನದ ಜೊತೆಗೆ ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳ ಕೃಷಿ ಹಾಗೂ ಕುಡಿಯುವ ನೀರಿನ ಪ್ರಮುಖ ಆಧಾರವಾಗಿದೆ. ಹೀಗಾಗಿ ಜಲಾಶಯ ಭರ್ತಿಯಾಗದಿದ್ದರೆ ಈ ಜಿಲ್ಲೆಗಳ ರೈತರು ಹಾಗೂ ಜನಸಾಮಾನ್ಯರು ಗಂಭೀರ ಸಂಕಷ್ಟ ಎದುರಿಸಬೇಕಾಗುತ್ತದೆ.
ಇಂತಹ ಪರಿಸ್ಥಿತಿಯ ನಡುವೆಯೂ ನಾಲೆಗಳಿಗೆ 300 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಆದರೆ ಮಲೆನಾಡು ಭಾಗಗಳಾದ ಮೂಡಿಗೆರೆ, ಸಕಲೇಶಪುರ ಹಾಗೂ ಆಲೂರಿನಲ್ಲಿ ಮಳೆ ಚುರುಕುಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನೀರಿನ ಕೊರತೆ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ. ಕೃಷಿ ಚಟುವಟಿಕೆಗಳು ಈಗಾಗಲೇ ನಿಧಾನಗೊಂಡಿದ್ದು, ಎಲ್ಲರ ಚಿತ್ತ ಈಗ ಮುಂಗಾರು ಮಳೆಯತ್ತ ನೆಟ್ಟಿದೆ.



