ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಅಂಕೋಲ ತಾಲೂಕಿನ ಜನಪ್ರಿಯ ಪ್ರವಾಸಿ ತಾಣವಾದ ವಿಭೂತಿ ಜಲಪಾತಕ್ಕೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ಸಂಪೂರ್ಣ ನಿಷೇಧಿಸಲಾಗಿದೆ.
ಯಾಣ ಪ್ರವಾಸಿ ವಲಯದ ಭಾಗವಾಗಿರುವ ವಿಭೂತಿ ಫಾಲ್ಸ್‌ಗೆ ಮಳೆಗಾಲದಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ನಿರಂತರ ಮಳೆಯಿಂದ ಜಲಪಾತದಲ್ಲಿ ಏಕಾಏಕಿ ನೀರಿನ ಪ್ರಮಾಣ ಹೆಚ್ಚಾಗುವ ಹಾಗೂ ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಎಚ್ಚರಿಕೆಯ ಕ್ರಮವಾಗಿ ನಿರ್ಬಂಧ ಹೇರಿದೆ.
ಜಿಲ್ಲಾಡಳಿತದ ನಿರ್ದೇಶನದಂತೆ ಹೊಸಕಂಬಿ ಅರಣ್ಯ ಇಲಾಖೆ ಪ್ರವೇಶ ನಿಷೇಧ ಆದೇಶ ಜಾರಿಗೊಳಿಸಿದ್ದು, ಜಲಪಾತ ಪ್ರದೇಶದಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಈ ಹಿಂದೆ ಭಾರೀ ಮಳೆಯ ಸಂದರ್ಭದಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾಗಿ ಪ್ರವಾಸಿಗರ ಜೀವಕ್ಕೆ ಅಪಾಯ ಎದುರಾದ ಘಟನೆಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಹೆಚ್ಚಿನ ಮಹತ್ವ ದೊರೆತಿದೆ.
ಮಳೆಗಾಲದಲ್ಲಿ ಅಪಾಯದ ಪ್ರಮಾಣ ಹೆಚ್ಚಾಗುವ ಕಾರಣ ಪ್ರತಿ ವರ್ಷ ಜೂನ್ ತಿಂಗಳಲ್ಲಿ ನಿರ್ಬಂಧ ಜಾರಿಗೊಳಿಸಲಾಗುತ್ತದೆ. ಈ ವರ್ಷವೂ ಸುರಕ್ಷತೆಯ ದೃಷ್ಟಿಯಿಂದ ಜೂನ್ ಎರಡನೇ ವಾರದಲ್ಲೇ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ಆದೇಶದವರೆಗೆ ಪ್ರವಾಸಿಗರು ವಿಭೂತಿ ಜಲಪಾತಕ್ಕೆ ಭೇಟಿ ನೀಡದಂತೆ ಅರಣ್ಯ ಇಲಾಖೆ ಸ್ಪಷ್ಟ ಸೂಚನೆ ನೀಡಿದೆ.



