ಬೆಂಗಳೂರು: ಸ್ಟಾರ್ ಏರ್ ಸಂಸ್ಥೆ ಬೆಂಗಳೂರು–ಬೀದರ್–ಬೆಂಗಳೂರು ನಡುವಿನ ವಿಮಾನ ವೇಳಾಪಟ್ಟಿಯನ್ನು ನಾಳೆಯಿಂದ ಅನ್ವಯವಾಗುವಂತೆ ಬದಲಾಯಿಸಿರುವುದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಅವರು ಮುಖ್ಯಮಂತ್ರಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಿಗೆ ಪತ್ರ ಬರೆದು, ಈ ಹಿಂದೆ ಇದ್ದ ಬೆಳಗಿನ ವೇಳಾಪಟ್ಟಿ ಪ್ರಯಾಣಿಕರಿಗೆ ಅತ್ಯಂತ ಅನುಕೂಲಕರವಾಗಿತ್ತು ಎಂದು ತಿಳಿಸಿದ್ದಾರೆ. ಬೆಳಗ್ಗೆ 6:30ಕ್ಕೆ ಬೆಂಗಳೂರಿನಿಂದ ಹೊರಟ ವಿಮಾನ 7:45ಕ್ಕೆ ಬೀದರ್ ತಲುಪಿ, 8:15ಕ್ಕೆ ಬೀದರ್‌ನಿಂದ ಹೊರಟು 9:30ಕ್ಕೆ ಮತ್ತೆ ಬೆಂಗಳೂರಿಗೆ ಆಗಮಿಸುತ್ತಿತ್ತು ಎಂದು ವಿವರಿಸಿದ್ದಾರೆ.
ಈ ಬೆಳಗಿನ ವೇಳಾಪಟ್ಟಿ ಬೀದರ್ ಹಾಗೂ ಸುತ್ತಮುತ್ತಲ ಜಿಲ್ಲೆಗಳ ಪ್ರಯಾಣಿಕರು, ವ್ಯಾಪಾರಿಗಳು ಮತ್ತು ತೆಲಂಗಾಣ ಭಾಗದ ಪ್ರಯಾಣಿಕರಿಗೆ ಸಹಾಯಕವಾಗಿತ್ತು ಎಂದು ಅವರು ಹೇಳಿದ್ದಾರೆ.
ಆದರೆ ಹೊಸ ವೇಳಾಪಟ್ಟಿಯಂತೆ ಜೂನ್ 10ರಿಂದ ವಿಮಾನ ಮಧ್ಯಾಹ್ನ 12:30ಕ್ಕೆ ಬೆಂಗಳೂರಿನಿಂದ ಹೊರಟು 1:45ಕ್ಕೆ ಬೀದರ್ ತಲುಪಲಿದೆ. ಬಳಿಕ 2:30ಕ್ಕೆ ಬೀದರ್‌ನಿಂದ ಹೊರಟು 3:30ಕ್ಕೆ ಬೆಂಗಳೂರಿಗೆ ಮರಳಲಿದೆ.
ಈ ಬದಲಾವಣೆಯಿಂದ ಪ್ರಯಾಣಿಕರ ಅನುಕೂಲತೆ ಕಡಿಮೆಯಾಗುವ ಸಾಧ್ಯತೆ ಇದ್ದು, ಪ್ರಯಾಣಿಕರ ಸಂಖ್ಯೆಯಲ್ಲಿಯೂ ಇಳಿಕೆ ಉಂಟಾಗಬಹುದು ಎಂದು ಸಚಿವರು ಎಚ್ಚರಿಸಿದ್ದಾರೆ. ಜೊತೆಗೆ ರಾಜ್ಯ ಸರ್ಕಾರ ಮತ್ತು ಕೆಕೆಆರ್‌ಡಿಬಿಯಿಂದ ನೀಡಲಾಗುತ್ತಿರುವ ವಿಜಯಬಿಲಿಟಿ ಗ್ಯಾಪ್ ಫಂಡ್ (ವಿಜಿಎಫ್) ಬಳಕೆ ಸಹ ಪರಿಣಾಮಕಾರಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಉಡಾನ್ ಯೋಜನೆಯಡಿ ಕೇಂದ್ರ ಸಬ್ಸಿಡಿ ಸ್ಥಗಿತಗೊಂಡ ನಂತರ ಸೇವೆ ಹಲವು ಬಾರಿ ನಿಲ್ಲಿಸಿ ಮತ್ತೆ ಆರಂಭಿಸಲಾಗಿದ್ದು, ರಾಜ್ಯ ಸರ್ಕಾರದ ಸಹಾಯಧನದಿಂದ ಮಾತ್ರ ಈ ಮಾರ್ಗ ನಿರ್ವಹಣೆಯಾಗುತ್ತಿದೆ ಎಂದು ಅವರು ಪತ್ರದಲ್ಲಿ ಸ್ಮರಿಸಿದ್ದಾರೆ.



