ಬೆಂಗಳೂರು: ಮನೆ ಕೆಲಸದ ನೆಪದಲ್ಲಿ ಉದ್ಯಮಿಯ ನಿವಾಸಕ್ಕೆ ಸೇರಿದ್ದ ದಂಪತಿ, ₹25 ಲಕ್ಷ ನಗದು ಕಳವು ಮಾಡಿ ಪರಾರಿಯಾಗಿದ್ದ ಪ್ರಕರಣವನ್ನು ಅಮೃತಹಳ್ಳಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ನೇಪಾಳ ಮೂಲದ ದಂಪತಿಯನ್ನು ಬಂಧಿಸಿ, ಕಳವು ಮಾಡಿದ್ದ ಸಂಪೂರ್ಣ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಪವನ್ ಬಿಸ್ತಾ ಮತ್ತು ಸೀತಾ ಬಿಸ್ತಾ ಎಂದು ಗುರುತಿಸಲಾಗಿದೆ. ಆರೋಪಿಗಳು ಸುಮಾರು ಒಂದು ತಿಂಗಳ ಹಿಂದೆ ಅಮೃತಹಳ್ಳಿ ವ್ಯಾಪ್ತಿಯ ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು.
ತನಿಖೆ ವೇಳೆ ಬೆಳಕಿಗೆ ಬಂದ ಮಾಹಿತಿಯ ಪ್ರಕಾರ, ಮನೆಯ ಮಾಲೀಕರು ಸಿಬ್ಬಂದಿಗೆ ಸಂಬಳ ನೀಡುವ ಉದ್ದೇಶದಿಂದ ಬ್ಯಾಂಕ್‌ನಿಂದ ₹25 ಲಕ್ಷ ಹಣವನ್ನು ಡ್ರಾ ಮಾಡಿ ಮನೆಯ ಕಬೋರ್ಡ್‌ನಲ್ಲಿ ಇಟ್ಟು ಲಾಕ್ ಮಾಡಿದ್ದರು. ಕಬೋರ್ಡ್‌ನ ಕೀಲಿಯನ್ನು ಮತ್ತೊಂದು ಕಬೋರ್ಡ್‌ನಲ್ಲಿ ಇರಿಸಲಾಗಿತ್ತು.
ಈ ಮಾಹಿತಿ ಆರೋಪಿಗಳಿಗೆ ತಿಳಿದಿದ್ದು, ಮನೆಯ ಮಾಲೀಕರು ಇಲ್ಲದ ಸಮಯವನ್ನು ಬಳಸಿಕೊಂಡು ಕಬೋರ್ಡ್‌ನಲ್ಲಿದ್ದ ₹25 ಲಕ್ಷ ನಗದು ಹಣವನ್ನು ಕಳವು ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಕಳವು ಮಾಡುವ ಉದ್ದೇಶದಿಂದಲೇ ಕಡಿಮೆ ಸಂಬಳಕ್ಕೆ ಮನೆ ಕೆಲಸಕ್ಕೆ ಸೇರಿದ್ದರು ಎಂಬ ಅನುಮಾನ ವ್ಯಕ್ತವಾಗಿದೆ. ಕಳವು ನಡೆದ ತಕ್ಷಣ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.
ತಾಂತ್ರಿಕ ಮಾಹಿತಿ ಮತ್ತು ತನಿಖೆಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳು ಬೆಂಗಳೂರು ತೊರೆಯುವ ಮುನ್ನವೇ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕಳವು ಮಾಡಿದ್ದ ₹25 ಲಕ್ಷ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಅಮೃತಹಳ್ಳಿ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



