ನವದೆಹಲಿ: ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇಂತಹ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ವಿನಾಯಿತಿ ನೀಡಿದೆ.
ಇ22 (22 ಶೇಕಡಾ ಎಥೆನಾಲ್ ಮತ್ತು 78 ಶೇಕಡಾ ಪೆಟ್ರೋಲ್), ಇ25, ಇ27 ಹಾಗೂ ಇ30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಎಥೆನಾಲ್ ಮಿಶ್ರಿತ ಇಂಧನಗಳ ಬಳಕೆಯನ್ನು ದೇಶಾದ್ಯಂತ ಹೆಚ್ಚಿಸುವುದು ಹಾಗೂ ಪರಿಸರ ಸ್ನೇಹಿ ಇಂಧನಕ್ಕೆ ಉತ್ತೇಜನ ನೀಡುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಸರ್ಕಾರ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯ ಪ್ರದೇಶದಲ್ಲಿನ ಉದ್ವಿಗ್ನತೆ ಮತ್ತು ಯುದ್ಧ ಪರಿಸ್ಥಿತಿಯ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದ್ದು, ಭಾರತದಲ್ಲಿಯೂ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಏರಿಕೆ ಕಂಡುಬಂದಿದೆ. ಕಳೆದ ತಿಂಗಳಲ್ಲಿ 11 ದಿನಗಳ ಅಂತರದಲ್ಲಿ ಪೆಟ್ರೋಲ್ ದರವು 7.50 ರೂಪಾಯಿವರೆಗೆ ಹೆಚ್ಚಳವಾಗಿರುವುದು ವಾಹನ ಸವಾರರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ತಂದಿದೆ.
ಪ್ರಸ್ತುತ ಭಾರತ ತನ್ನ ಒಟ್ಟು ಕಚ್ಚಾ ತೈಲ ಅಗತ್ಯದ ಸುಮಾರು 87 ಶೇಕಡಾವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಇದರಿಂದ ವಿದೇಶಿ ವಿನಿಮಯ ವೆಚ್ಚ ಹೆಚ್ಚಾಗುವುದರ ಜೊತೆಗೆ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀಳುತ್ತಿದೆ.



