HomeGadag Newsಗೃಹಲಕ್ಷ್ಮಿ ಹಣದ ಸೋರಿಕೆಗೆ ಬೀಗ!

ಗೃಹಲಕ್ಷ್ಮಿ ಹಣದ ಸೋರಿಕೆಗೆ ಬೀಗ!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ವಿತರಣೆಯಲ್ಲಿ ಯಾವುದೇ ರೀತಿಯ ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಜಾರಿಗೊಂಡಿರುವ ಯೋಜನೆಯ ಪ್ರಯೋಜನ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪಬೇಕು ಎಂದು ಹೇಳಿದರು.

ಯೋಜನೆಯ ಹಣ ದುರುಪಯೋಗವಾಗದಂತೆ ನಿಗಾ ವಹಿಸಬೇಕು. ವಿಶೇಷವಾಗಿ ಮೃತಪಟ್ಟ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗದಂತೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಅಂತಹ ಪ್ರಕರಣಗಳು ಕಂಡುಬಂದಿದ್ದರೆ ಸರ್ಕಾರಕ್ಕೆ ಹಣ ಮರುಪಾವತಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದು ನಿರ್ದೇಶನ ನೀಡಿದರು.

ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಫಲಾನುಭವಿಗಳ ಹಾಗೂ ಮೃತಪಟ್ಟವರ ಮಾಹಿತಿಯನ್ನು ಸಂಗ್ರಹಿಸಬೇಕು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಈ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಬ್ಯಾಂಕ್‌ಗಳಿಗೆ ಸಲ್ಲಿಸುವಂತೆ ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಸದಸ್ಯ ಅಶೋಕ ಮಂದಾಲಿ, ಆಧಾರ್ ಸೀಡಿಂಗ್ ಹಾಗೂ ಇತರ ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು. ಮನೆಮನೆ ಸಮೀಕ್ಷೆಯಲ್ಲಿ ವಿಳಂಬವಾಗಬಾರದು. ಅಗತ್ಯವಿದ್ದರೆ ಹೆಚ್ಚುವರಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಮಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಜಾರಿಗೊಂಡಿರುವ ಯೋಜನೆಯ ಅನುಷ್ಠಾನದಲ್ಲಿ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಇ-ಕೆವೈಸಿ, ಎನ್‌ಪಿಸಿಐ ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಪದಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಅಂಗನವಾಡಿ ಮೇಲ್ವಿಚಾರಕರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 2.61 ಲಕ್ಷ ಅರ್ಜಿಗಳ ನೋಂದಣಿ

ಗೃಹಲಕ್ಷ್ಮಿ ಯೋಜನೆಯಡಿ ಗದಗ ಜಿಲ್ಲೆಯಲ್ಲಿ ಫೆಬ್ರವರಿ 2026ರವರೆಗೆ 2,61,860 ಅರ್ಜಿಗಳು ನೋಂದಣಿಯಾಗಿದ್ದು, 2,52,843 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ಜಿಲ್ಲೆ ಒಟ್ಟಾರೆ ಶೇ.96.56ರಷ್ಟು ಸಾಧನೆ ದಾಖಲಿಸಿದೆ.

ತಾಲೂಕುವಾರು ಸಾಧನೆಯಲ್ಲಿ ಶಿರಹಟ್ಟಿ (96.97%) ಮೊದಲ ಸ್ಥಾನದಲ್ಲಿದ್ದು, ಲಕ್ಷ್ಮೇಶ್ವರ (96.83%), ನರಗುಂದ (96.62%), ಮುಂಡರಗಿ (96.52%), ರೋಣ (96.53%), ಗದಗ (96.50%) ಹಾಗೂ ಗಜೇಂದ್ರಗಡ (96.14%) ಕ್ರಮವಾಗಿ ಸ್ಥಾನ ಪಡೆದಿವೆ.

“ಗೃಹಲಕ್ಷ್ಮಿ ಯೋಜನೆಯ ಸೌಲಭ್ಯದಿಂದ ಯಾವುದೇ ಅರ್ಹ ಮಹಿಳೆ ವಂಚಿತರಾಗಬಾರದು. ಯೋಜನೆಯ ಹಣ ದುರುಪಯೋಗ ಹಾಗೂ ಮೃತರ ಖಾತೆಗೆ ಜಮೆಯಾಗುವುದನ್ನು ತಡೆಯಲು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.”

ಬಿ.ಬಿ. ಅಸೂಟಿ

ಅಧ್ಯಕ್ಷರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!