ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಅಂತ್ಯಗೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಈ ವಾರಾಂತ್ಯದಲ್ಲೇ ಶಾಂತಿ ಒಪ್ಪಂದಕ್ಕೆ ಸಹಿ ಬೀಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ಜೊತೆಗಿನ ಸಂಘರ್ಷ ಅಂತ್ಯಗೊಳಿಸಲು ಮಹತ್ವದ ಒಪ್ಪಂದದ ಅಂತಿಮ ಹಂತ ತಲುಪಿದ್ದೇವೆ ಎಂದು ಹೇಳಿದ್ದಾರೆ. ಶಾಂತಿ ಒಪ್ಪಂದ ಜಾರಿಯಾದ ತಕ್ಷಣ ಜಾಗತಿಕ ತೈಲ ಸಾಗಣೆಗೆ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿ ಸಂಪೂರ್ಣವಾಗಿ ತೆರೆಯುವ ಸಾಧ್ಯತೆ ಇದೆ ಎಂದಿದ್ದಾರೆ.
ಈ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಬಹ್ರೇನ್ ಹಾಗೂ ಕುವೈತ್ ನಾಯಕರೊಂದಿಗೆ ಮಾತುಕತೆ ನಡೆಸಿರುವುದಾಗಿ ಟ್ರಂಪ್ ತಿಳಿಸಿದ್ದಾರೆ. ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರೊಂದಿಗೂ ಶೀಘ್ರದಲ್ಲೇ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.
ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳಿಗೂ ಈ ಒಪ್ಪಂದದಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಟ್ರಂಪ್ ಹೇಳಿದ್ದು, ಸಹಿ ಸಮಾರಂಭದ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದ್ದಾರೆ.



