ನವದೆಹಲಿ: ಭಾರತೀಯ ಶೂಟಿಂಗ್ ಕ್ಷೇತ್ರದ ದಿಗ್ಗಜ, ಖ್ಯಾತ ಕೋಚ್ ಹಾಗೂ ಮಾಜಿ ಶೂಟರ್ ಜಸ್ಪಾಲ್ ರಾಣಾ ಅವರು 49ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಕೆಲವು ದಿನಗಳ ಹಿಂದೆ ಜರ್ಮನಿಯ ಮ್ಯೂನಿಕ್‌ನಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವಕಪ್ ಟೂರ್ನಿಯ ವೇಳೆ ಜಸ್ಪಾಲ್ ರಾಣಾ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಆರಂಭದಲ್ಲಿ ಅದನ್ನು ಸಾಮಾನ್ಯ ಅಸಿಡಿಟಿ ಎಂದು ಭಾವಿಸಿ ಅವರು ಪ್ರವಾಸ ಮುಂದುವರಿಸಿದ್ದರು. ಆದರೆ ಭಾರತಕ್ಕೆ ಮರಳುವ ವೇಳೆ ವಿಮಾನ ಪ್ರಯಾಣದ ಸಂದರ್ಭದಲ್ಲೂ ಮತ್ತೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೆಹಲಿ ತಲುಪುತ್ತಿದ್ದಂತೆಯೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯಕೀಯ ತಪಾಸಣೆಯಲ್ಲಿ ಹೃದಯದ ರಕ್ತನಾಳದಲ್ಲಿ ಗಂಭೀರ ಬ್ಲಾಕೇಜ್ ಇರುವುದು ಪತ್ತೆಯಾಗಿತ್ತು. ವೈದ್ಯರು ಸ್ಟೆಂಟ್ ಅಳವಡಿಸಿ ಚಿಕಿತ್ಸೆ ನೀಡಿದ್ದರೂ, ಮತ್ತೊಂದು ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆಯುತ್ತಿದ್ದ ವೇಳೆಯೇ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.
ಭಾರತೀಯ ಶೂಟಿಂಗ್ ಕ್ರೀಡೆಗೆ ಅಪಾರ ಕೊಡುಗೆ ನೀಡಿದ್ದ ಜಸ್ಪಾಲ್ ರಾಣಾ ಅವರ ಅಗಲಿಕೆ ಕ್ರೀಡಾ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.



