ಬೆಂಗಳೂರು: ನಟ ದರ್ಶನ್ ಸೇರಿದಂತೆ ಹಲವರು ಆರೋಪಿಗಳಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮಹತ್ವದ ಹಂತ ತಲುಪಿದ್ದು, ಪ್ರಕರಣದ ತ್ವರಿತಗತಿ ವಿಚಾರಣೆಗೆ ಸೆಷನ್ಸ್ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.
ಸಿಸಿಎಚ್-59 ನ್ಯಾಯಾಲಯವು ವಾರದಲ್ಲಿ ಕನಿಷ್ಠ ನಾಲ್ಕು ದಿನಗಳ ಕಾಲ ನಿರಂತರ ವಿಚಾರಣೆ ನಡೆಸಲು ಸೂಚಿಸಿದ್ದು, ಅಗತ್ಯವಿದ್ದರೆ ಐದನೇ ದಿನವೂ ವಿಚಾರಣೆ ನಡೆಸಲು ಸಿದ್ಧರಿರಬೇಕು ಎಂದು ಉಭಯ ಪಕ್ಷಗಳ ವಕೀಲರಿಗೆ ತಿಳಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಒಂದು ವರ್ಷದೊಳಗೆ ಪ್ರಕರಣದ ಪ್ರಮುಖ 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಬೇಕಿರುವ ಹಿನ್ನೆಲೆಯಲ್ಲಿ, ಯಾವುದೇ ಕಾರಣಕ್ಕೂ ವಿಚಾರಣೆಯನ್ನು ಅನಗತ್ಯವಾಗಿ ಮುಂದೂಡಬಾರದು ಎಂದು ನ್ಯಾಯಾಲಯ ಖಡಕ್ ಸೂಚನೆ ನೀಡಿದೆ.
ವಿಚಾರಣೆ ವೇಳೆ ಸರ್ಕಾರದ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ಅವರು, ಪ್ರಕರಣದ ವೇಗವಾದ ವಿಚಾರಣೆಗಾಗಿ ಪ್ರತಿದಿನವೂ ವಿಚಾರಣೆ ನಡೆಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯ, ವಾರಕ್ಕೆ ಕನಿಷ್ಠ ಇಬ್ಬರು ಸಾಕ್ಷಿಗಳ ಪಾಟೀಸವಾಲು ಪೂರ್ಣಗೊಳಿಸಬೇಕು ಹಾಗೂ ತಿಂಗಳಿಗೆ ಕನಿಷ್ಠ ಎಂಟು ಸಾಕ್ಷಿಗಳ ವಿಚಾರಣೆ ಮುಗಿಯಬೇಕು ಎಂದು ನಿರ್ದೇಶನ ನೀಡಿತು.
ಇದೇ ವೇಳೆ ಸಾಕ್ಷಿಯೊಬ್ಬರ ಕ್ರಾಸ್ ಎಕ್ಸಾಮಿನೇಷನ್‌ಗೆ ಹೆಚ್ಚಿನ ಸಮಯ ನೀಡುವಂತೆ ದರ್ಶನ್ ಪರ ವಕೀಲರು ಮನವಿ ಮಾಡಿದಾಗ, ಕಾಲಹರಣಕ್ಕೆ ಅವಕಾಶ ನೀಡಬಾರದು ಎಂದು ಎಸ್‌ಪಿಪಿ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ನ್ಯಾಯಾಲಯದ ಸೂಚನೆಗೆ ದರ್ಶನ್ ಪರ ವಕೀಲರು ಸಹ ಒಪ್ಪಿಗೆ ಸೂಚಿಸಿದರು.
ಇನ್ನೊಂದೆಡೆ, ವಿಡಿಯೋ ಕಾನ್ಫರೆನ್ಸ್ ಮೂಲಕವಲ್ಲದೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಅವಕಾಶ ನೀಡುವಂತೆ ನಟ ದರ್ಶನ್ ಪರ ವಕೀಲರು ವಿಶೇಷ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದಕ್ಕೆ ಸರ್ಕಾರದ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕವೇ ಹಾಜರಾಗುವುದು ಸಾಕು ಎಂದು ವಾದಿಸಿದ್ದಾರೆ.
ಈ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಪರ ಅಧಿಕೃತ ಆಕ್ಷೇಪಣೆಯನ್ನು ಮಂಗಳವಾರ ಸಲ್ಲಿಸಲಾಗಲಿದ್ದು, ಬಳಿಕ ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ.



