ನವದೆಹಲಿ: ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ನ ನೋಂದಣಿ, ಆದಾಯ ಹಾಗೂ ಆಸ್ತಿಪಾಸ್ತಿ ವಿವರಗಳನ್ನು ಕೇಳಿ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿರುವ ವಿಚಾರಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗಳಿಗೆ ಆರ್ಎಸ್ಎಸ್ ಕಾನೂನುಬದ್ಧವಾಗಿ ಉತ್ತರ ನೀಡಲಿದೆ ಎಂದು ಹೇಳಿದರು. ಸಂಘ-ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕನ್ನು ದೇಶದ ಸಂವಿಧಾನವೇ ನೀಡಿದ್ದು, ಅದು ಕೇವಲ ಆರ್ಎಸ್ಎಸ್ಗೆ ಮಾತ್ರ ಸೀಮಿತವಾಗಿಲ್ಲ. ಗ್ರಾಮೀಣ ಭಾಗದ ಕೆಲ ಯುವಕರೂ ಸೇರಿ ಸಂಘಟನೆಯನ್ನು ಕಟ್ಟಬಹುದು ಎಂದು ತಿಳಿಸಿದರು.
ಆರ್ಎಸ್ಎಸ್ ಸಂವಿಧಾನ ಜಾರಿಗೆ ಬರುವುದಕ್ಕೂ ಮುನ್ನ ಹಾಗೂ ಬ್ರಿಟಿಷರ ಆಡಳಿತದ ಕಾಲದಿಂದಲೂ ಕಾರ್ಯನಿರ್ವಹಿಸುತ್ತಿದೆ. ಸಂಘದ ಆಸ್ತಿ, ಹಣಕಾಸು ವ್ಯವಹಾರಗಳು ಎಲ್ಲವೂ ನಿಯಮಾನುಸಾರ ನಡೆಯುತ್ತಿವೆ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಇದೇ ಮೊದಲ ಬಾರಿಗೆ ಆರ್ಎಸ್ಎಸ್ ಬಗ್ಗೆ ಪ್ರಶ್ನೆ ಎತ್ತುತ್ತಿಲ್ಲ. ಐಟಿ-ಬಿಟಿ ಇಲಾಖೆಯಲ್ಲಿ ಸಂಶೋಧನೆ ಮತ್ತು ನವೋದ್ಯಮಗಳಿಗೆ ಉತ್ತೇಜನ ನೀಡಬೇಕಿದ್ದ ಅವರು, ಈಗ ಆರ್ಎಸ್ಎಸ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಹಿಂದೆಯೂ ಆರ್ಎಸ್ಎಸ್ ಪಥಸಂಚಲನಕ್ಕೆ ವಿರೋಧ ವ್ಯಕ್ತವಾಗಿತ್ತು. ಆದರೆ ನ್ಯಾಯಾಲಯ ಅನುಮತಿ ನೀಡಿದ ಬಳಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು. ವಿರೋಧ ಹೆಚ್ಚಾದಷ್ಟು ಸಂಘದ ವಿಚಾರಧಾರೆ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಹೇಳಿದರು.
ದೇಶದ ಸಂವಿಧಾನದ ಚೌಕಟ್ಟಿನಲ್ಲಿಯೇ ಆರ್ಎಸ್ಎಸ್ ಕಾರ್ಯನಿರ್ವಹಿಸುತ್ತಿದೆ. ನೋಂದಣಿ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ. ಈ ವಿಷಯದಲ್ಲಿ ಪ್ರಿಯಾಂಕ್ ಖರ್ಗೆ ಅವರು ಮೊದಲು ಕಾನೂನು ಸಲಹೆ ಪಡೆಯಬೇಕಿತ್ತು. ಸೂಕ್ತ ಸಮಯದಲ್ಲಿ ಆರ್ಎಸ್ಎಸ್ ಹಾಗೂ ಜನರೇ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು.



