HomeKarnataka Newsಕಸದ ಹಗರಣದ ವಿರುದ್ಧ ಬೆಂಗಳೂರಿನ ನಾಗರಿಕರು ಪತ್ರ ಚಳವಳಿ ಮಾಡಿ: ಆರ್.ಅಶೋಕ್ ಮನವಿ

ಕಸದ ಹಗರಣದ ವಿರುದ್ಧ ಬೆಂಗಳೂರಿನ ನಾಗರಿಕರು ಪತ್ರ ಚಳವಳಿ ಮಾಡಿ: ಆರ್.ಅಶೋಕ್ ಮನವಿ

For Dai;y Updates Join Our whatsapp Group

Spread the love

ಬೆಂಗಳೂರು: ಬೆಂಗಳೂರಿನ ಭವಿಷ್ಯದ ದೃಷ್ಟಿಯಿಂದ ಎಲ್ಲ ಸಂಘಟನೆಗಳು, ನಾಗರಿಕರು ಕಸದ ಟೆಂಡರ್‌ ಹಗರಣದ ವಿರುದ್ಧ ರಾಜ್ಯಪಾಲರಿಗೆ ಹಾಗೂ ರಾಷ್ಟ್ರಪತಿಯವರಿಗೆ ಪತ್ರ ಬರೆಯಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಘನತ್ಯಾಜ್ಯ ಸಂಸ್ಕರಣೆಗೆ 39,437 ಕೋಟಿ ರೂ. ಟೆಂಡರ್‌ ನೀಡಿರುವುದು ದೊಡ್ಡ ಹಗರಣ ಎಂದು ಈಗಾಗಲೇ ಹೇಳಿದ್ದೇನೆ. ನಗರದ ಗಾರ್ಬೇಜ್‌ನಿಂದ ಕಾಂಗ್ರೆಸ್‌ ಹೈಕಮಾಂಡ್‌ಗೆ ಲಗೇಜು ಸಿಗುತ್ತಿದ್ದು, ಇದರಿಂದ ಜನರಿಗೆ ಡ್ಯಾಮೇಜ್‌ ಆಗಿದೆ.

ಇದಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಪರಿಶೀಲನಾ ಸಮಿತಿಗೆ ನಾನು ಪತ್ರ ಬರೆದು, ಪ್ರಾಮಾಣಿಕತೆಯಿಂದ ವರದಿ ತಯಾರಿಸಿ ಎಂದು ಮನವಿ ಮಾಡಿದ್ದೇನೆ. ಲೋಕಾಯುಕ್ತಕ್ಕೆ ದೂರು ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇನೆ. ಇದು ನಗರದ 30 ವರ್ಷಗಳ ಭವಿಷ್ಯವಾಗಿದೆ. ಮುಂದಿನ ಮೂರು ಪೀಳಿಗೆಗಳು ಅಂದ್ರೆ ಜೆನ್‌ ಜೀ, ಆಲ್ಫಾ ಹಾಗೂ ಮುಂದಿನ ಪೀಳಿಗೆ ಕೂಡ ಇದನ್ನು ನೋಡಬೇಕಿದೆ. ಸಿಎಂ ಡಿ.ಕೆ.ಶಿವಕುಮಾರ್‌ ಬ್ರ್ಯಾಂಡ್‌ ಹೆಸರು ಹೇಳಿಕೊಂಡು ನಗರದಲ್ಲಿ ಕಸ ರಾಶಿ ಹಾಕಲು ಕಾರಣರಾಗಿದ್ದಾರೆ ಎಂದರು.

ಇದು ಬೆಂಗಳೂರಿನ ಜನರ ಮೇಲೆ ಹೊರೆಯಾಗಲಿದೆ. ಆದ್ದರಿಂದ ಜನರು ಈ ಕುರಿತು ಪತ್ರ ಚಳವಳಿ ಮಾಡಬೇಕು. ಎಲ್ಲ ಸಂಘ ಸಂಸ್ಥೆಗಳು, ಅಪಾರ್ಟ್‌ಮೆಂಟ್‌ ಸಂಘಟನೆಗಳು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ರಾಜ್ಯಪಾಲರಿಗೆ ಹಾಗೂ ರಾಷ್ಟ್ರಪತಿಗೆ ಪತ್ರ ಬರೆಯಬೇಕು. ಈ ಮೂಲಕ ನಗರದ ಭವಿಷ್ಯವನ್ನು ಕಾಪಾಡಬೇಕು ಎಂದು ಕೋರಿದರು.

ನಾನು ಕಸದ ಟೆಂಡರ್‌ ಯಾವತ್ತೂ ಕರೆದಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಈ ಎಲ್ಲವನ್ನೂ ಮಾಡಿ ಮಾಫಿಯಾದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ನಾನು ಜನರ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದೇನೆ. ನಾನು ಬೇಕಿದ್ದರೆ ನಾಳೆಯೇ ಸಿಬಿಐಗೆ ತನಿಖೆಗೆ ವಹಿಸಲು ಆಗ್ರಹಿಸುತ್ತೇನೆ.

ಆದರೆ ಸರ್ಕಾರದ ಕಡೆಯಿಂದ ಅದನ್ನು ಅನುಮೋದಿಸಬೇಕಾಗುತ್ತದೆ. ಡಿ.ಕೆ.ಶಿವಕುಮಾರ್‌ 60 ವರ್ಷಕ್ಕೆ ಕಸದ ಟೆಂಡರ್‌ ವಹಿಸಿದ್ದಾರೆ. ಇದು ಜಾತಿಯ ಪ್ರಶ್ನೆ ಅಲ್ಲ. ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರೆ ಅಥವಾ ಮುಂದುವರಿದರೆ ನನಗೆ ಯಾವುದೇ ನಷ್ಟ, ಲಾಭ ಇಲ್ಲ. ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಬೆಂಗಳೂರಿಗೆ ಬಂದು ಕಸ ಗುಡಿಸಿದ್ದಾರೆ ಎಂದರೆ ಅದರ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಬಿಡದಿ ಯೋಜನೆ ಕೈ ಬಿಡಿ

ಬಿಡದಿ ಟೌನ್‌ಶಿಪ್‌ ಯೋಜನೆ ಪರಿಚಯವಾದಾಗಲೇ ನಾನು ರೈತರ ಜೊತೆ ಹೋರಾಟದಲ್ಲಿ ಭಾಗವಹಿಸಿದ್ದೆ. ನಂತರ ಬಂದ ಬಿ.ಎಸ್‌.ಯಡಿಯೂರಪ್ಪನವರ ಸರ್ಕಾರಿಂದ ಈ ಯೋಜನೆ ಜಾರಿಯಾಗಲಿಲ್ಲ. ನಂತರ ಬಂದ ಯಾವುದೇ ಮುಖ್ಯಮಂತ್ರಿಗಳು ಯೋಜನೆ ಜಾರಿಗೊಳಿಸಲಿಲ್ಲ. ಎಲ್ಲ ಮುಖ್ಯಮಂತ್ರಿಗಳು ಇದನ್ನು ಕೈ ಬಿಟ್ಟಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿಯವರ ಯೋಜನೆಯನ್ನು ನಾವು ಮುಂದುವರಿಸುತ್ತಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಹೇಳುತ್ತಾರೆ. ಅಂತಹ ಅಗತ್ಯವೇನೂ ಈಗ ಇಲ್ಲ. ಈ ಯೋಜನೆ ಕೈ ಬಿಟ್ಟುಬಿಟ್ಟರೆ ಸಾಕು ಎಂದರು.

ನಮ್ಮ ತೆರಿಗೆ ನಮ್ಮ ಹಕ್ಕು ಎಂದಂತೆ ಈಗ ರೈತರು ನಮ್ಮ ಭೂಮಿ ನಮ್ಮ ಹಕ್ಕು ಎನ್ನುತ್ತಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗ್ರೇಟ್‌ ನಿಕೋಬಾರ್‌ಗೆ ಹೋಗಿ ಸಸ್ಯಕಾಶಿಯನ್ನು ಹಾಳು ಮಾಡಿ ಯೋಜನೆ ಮಾಡುತ್ತಿದ್ದೀರಿ ಎಂದು ಟೀಕೆ ಮಾಡಿದ್ದಾರೆ. ಬಿಡದಿಯಲ್ಲಿ ರೈತರು ಕೃಷಿ ಮಾಡುತ್ತಿದ್ದು, ಇಲ್ಲಿ ವನ್ಯ ಸಂಪತ್ತು ಹಾಳಾದರೆ ರಾಹುಲ್‌ ಗಾಂಧಿ ಮಾತಾಡುವುದಿಲ್ಲ.

ಏಕೆಂದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸುವುದು ಮಾತ್ರ ಇವರ ಉದ್ದೇಶ. ಅದನ್ನು ಪರಿಸರ ನಾಶ ಎನ್ನುವ ಇವರು, ಇಲ್ಲಿನ ಯೋಜನೆಯನ್ನು ಬೆಂಬಲಿಸುತ್ತಿದ್ದಾರೆ. ದೇಶದ ಭದ್ರತೆಯ ದೃಷ್ಟಿಯಿಂದ ಗ್ರೇಟ್‌ ನಿಕೋಬಾರ್‌ ಯೋಜನೆ ಜಾರಿಯಾಗಿದೆ. ಆದರೆ ಬಿಡದಿಯಲ್ಲಿ ಮಾಡುವ ಯೋಜನೆಗೆ ಯಾವುದೇ ಉದ್ದೇಶವೇ ಇಲ್ಲ ಎಂದರು.

ಬಿಡದಿಯಲ್ಲಿ ಸಾವಿರಾರು ರೈತರು ಬೀದಿಗೆ ಬಂದು ಹೋರಾಡುತ್ತಿದ್ದಾರೆ. ಕೆಂಪೇಗೌಡ ಬಡಾವಣೆ ನಿರ್ಮಾಣವಾಗಿ ಹದಿನೈದು ವರ್ಷವಾದರೂ ಕುಡಿಯುವ ನೀರು, ವಿದ್ಯುತ್‌ ನೀಡಿಲ್ಲ. ಶಿವರಾಮ ಕಾರಂತ ಬಡಾವಣೆಯಲ್ಲೂ ಇದೇ ಪರಿಸ್ಥಿತಿ ಇದೆ. ಸರ್ಕಾರಿ ಯೋಜನೆಗಳಡಿ ನಗರದೊಳಗೆ 7-8 ಸಾವಿರ ನಿವೇಶನಗಳು ಖಾಲಿ ಇವೆ. ಸೂರ್ಯನಗರ ಹಾಗೂ ಸುತ್ತಮುತ್ತ 8 ಲಕ್ಷ ಫ್ಲ್ಯಾಟ್‌ಗಳು ಖಾಲಿ ಇವೆ. ಎಲ್ಲ ಸೇರಿ ಸುಮಾರು 20 ಲಕ್ಷ ನಿವೇಶನ – ಫ್ಲ್ಯಾಟ್‌ಗಳು ಖಾಲಿ ಇವೆ. ಇಂತಹ ಸಮಯದಲ್ಲಿ ಬಿಡದಿ ಟೌನ್‌ಶಿಪ್‌ ಅಗತ್ಯವಿಲ್ಲ ಎಂದರು.

ಹಿಂದೆ ಮೇಕೆದಾಟು ಯೋಜನೆಗಾಗಿ ಹೋರಾಟ ಮಾಡಿ ಅಧಿಕಾರ ಸಿಕ್ಕರೂ ಏನೂ ಮಾಡಿಲ್ಲ. ಕೇವಲ ಹೆಸರಿಗಾಗಿ ಹೋರಾಟ ಮಾಡಿ ನಂತರ ಅದನ್ನು ಮರೆಯುತ್ತಾರೆ. ಈ ಯೋಜನೆ ಕೂಡ ಹಾಗೆಯೇ ಆಗುತ್ತದೆ. ಮುಂದೆ ಬರುವ ಮುಖ್ಯಮಂತ್ರಿಗಳು ಅಭಿವೃದ್ಧಿ ಮಾಡುತ್ತಾರೆ.

ಎಲ್ಲವನ್ನೂ ಇವರೇ ಮಾಡಬೇಕಿಲ್ಲ. ಬಿಜೆಪಿ ಸರ್ಕಾರದಿಂದ ಭೂ ಸ್ವಾಧೀನ ಕಾನೂನಿನಲ್ಲಿ ತಿದ್ದುಪಡಿ ತಂದಿದ್ದರೂ ಲೇಔಟ್‌ ನಿರ್ಮಿಸಲು ಅವಕಾಶ ನೀಡಿಲ್ಲ. ಯುವ ಜನರು ಕೃಷಿ ಕೆಲಸ ಮಾಡಲು ಅದರಲ್ಲಿ ಅವಕಾಶ ಮಾಡಿಕೊಡಲಾಗಿದೆ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕರು ಕೃಷಿ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಕಾನೂನು ತಿದ್ದುಪಡಿಯಿಂದ ಅಂಥವರಿಗೆ ಅನುಕೂಲವಾಗಿದೆ ಎಂದರು.

ಅಭಿವೃದ್ಧಿ ಎಂದರೆ ಲೇಔಟ್‌ ನಿರ್ಮಿಸುವುದು ಎಂದು ಪ್ರಧಾನಿ ನರೇಂದ್ರ ಮೋದಿ ಎಂದೂ ಹೇಳಿಲ್ಲ. ಕಾಂಗ್ರೆಸ್‌ ನಾಯಕರು ಇದನ್ನು ಸಾಬೀತಪಡಿಸಲಿ. ಶಾಲೆ, ಆಸ್ಪತ್ರೆ ನಿರ್ಮಿಸುವುದು ಅಭಿವೃದ್ಧಿ ಎಂಬರ್ಥದಲ್ಲಿ ಪ್ರಧಾನಿ ಹೇಳಿರುತ್ತಾರೆ. ಗುಜರಾತ್‌ನಲ್ಲಿ ಭೂಕಂಪ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡಲಾಗಿದೆ. ಅದನ್ನು ಲೇಔಟ್‌ಗೆ ಹೋಲಿಸಬಾರದು ಎಂದರು.

ಗೃಹಲಕ್ಷ್ಮಿಗೆ ಕತ್ತರಿ

ಸತ್ತವರನ್ನು ಪತ್ತೆ ಮಾಡಲು ಗ್ಯಾರಂಟಿ ಸಮಿತಿಯನ್ನು ಬಳಸಿಕೊಳ್ಳಬೇಕಿತ್ತು. ಆದರೆ ಈ ಸಮಿತಿ ವ್ಯರ್ಥವಾಗಿದೆ. ಆದ್ದರಿಂದ ಈ ಸಮಿತಿಯನ್ನು ರದ್ದು ಮಾಡಿ ಖರ್ಚು ಮಾಡಿದ ಹಣವನ್ನು ಮರಳಿ ಪಡೆಯಬೇಕು. ಸತ್ತವರ ಹೆಸರು ಸ್ವಯಂಚಾಲಿತವಾಗಿ ರದ್ದಾಗಬೇಕು.

ಅದನ್ನು ಬಿಟ್ಟು ಪ್ರತ್ಯೇಕವಾಗಿ ಗೃಹಲಕ್ಷ್ಮಿ ಯೋಜನೆಯನ್ನು ಪರಿಷ್ಕರಿಸಲು ಸರ್ಕಾರ ಮುಂದಾಗಿದೆ. ಆದರೆ ವಾಸ್ತವದಲ್ಲಿ ಈ ನೆಪದಲ್ಲಿ ಫಲಾನುಭವಿಗಳ ಸಂಖ್ಯೆ ಕಡಿತ ಮಾಡಲಾಗುತ್ತಿದೆ. ಯೋಜನೆಯನ್ನು ಘೋಷಣೆ ಮಾಡುವಾಗಲೇ, ಷರತ್ತುಗಳ ಬಗ್ಗೆ ತಿಳಿಸಬೇಕಿತ್ತು. ಸರ್ಕಾರ ದಿವಾಳಿಯಾಗಿರುವುದರಿಂದ ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!