ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ನಡೆಯುತ್ತಿದೆ ಎನ್ನಲಾದ ಷಡ್ಯಂತ್ರದ ಆರೋಪಗಳ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲು ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವಹಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಸಿ.ಟಿ. ರವಿ, ಧರ್ಮಸ್ಥಳದ ಕುರಿತು ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಬೆಳವಣಿಗೆಗಳು ಕೋಟ್ಯಂತರ ಭಕ್ತರ ಮನಸ್ಸಿನಲ್ಲಿ ಆತಂಕ ಮತ್ತು ಅನುಮಾನಗಳನ್ನು ಮೂಡಿಸಿವೆ ಎಂದು ತಿಳಿಸಿದ್ದಾರೆ.
ಧರ್ಮಸ್ಥಳವು ಕೇವಲ ಒಂದು ಧಾರ್ಮಿಕ ಕ್ಷೇತ್ರವಲ್ಲ, ಅದು ಕೋಟ್ಯಂತರ ಜನರ ನಂಬಿಕೆ, ಭಕ್ತಿ ಮತ್ತು ಧಾರ್ಮಿಕ ಭಾವನೆಗಳ ಕೇಂದ್ರವಾಗಿದೆ. ಶಿಕ್ಷಣ, ಆರೋಗ್ಯ, ಸಮಾಜಸೇವೆ ಹಾಗೂ ಅನ್ನದಾನದಂತಹ ಅನೇಕ ಕ್ಷೇತ್ರಗಳಲ್ಲಿ ಧರ್ಮಸ್ಥಳ ಸಲ್ಲಿಸಿರುವ ಸೇವೆ ರಾಷ್ಟ್ರಕ್ಕೆ ಮಾದರಿಯಾಗಿದೆ. ಇಂತಹ ಸಂಸ್ಥೆ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಹಲವು ವರ್ಷಗಳಿಂದ ನಿರಂತರ ಆರೋಪಗಳು ಮತ್ತು ಅಪಪ್ರಚಾರಗಳು ನಡೆಯುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ಹೈಕೋರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಕೆಲವು ಗಣ್ಯ ವ್ಯಕ್ತಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರ ಹೆಸರುಗಳು ಉಲ್ಲೇಖವಾಗಿದ್ದು, ಧರ್ಮಸ್ಥಳ ಮತ್ತು ಡಾ. ವೀರೇಂದ್ರ ಹೆಗ್ಗಡೆ ವಿರುದ್ಧ ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಘಟಿತ ಷಡ್ಯಂತ್ರ ರೂಪಿಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ ಎಂದು ತಿಳಿಸಿದ್ದಾರೆ.
ಈ ಆರೋಪಗಳು ಸತ್ಯವೋ ಅಥವಾ ಸುಳ್ಳೋ ಎಂಬುದನ್ನು ತನಿಖೆಯೇ ನಿರ್ಧರಿಸಬೇಕು. ಆದರೆ ಧರ್ಮಸ್ಥಳದಂತಹ ಪ್ರತಿಷ್ಠಿತ ಸಂಸ್ಥೆಯ ವಿರುದ್ಧ ಇಷ್ಟೊಂದು ದೊಡ್ಡ ಮಟ್ಟದ ಅಭಿಯಾನ ನಡೆಸಲು ಹಣ ಎಲ್ಲಿಂದ ಬಂತು, ಅದರ ಹಿಂದೆ ಯಾರು ಇದ್ದರು ಹಾಗೂ ಯಾವುದೇ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿತ್ತೇ ಎಂಬ ಸತ್ಯ ಹೊರಬರಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿರುವ ಅನುಮಾನ ವ್ಯಕ್ತಪಡಿಸಿದ್ದೆ. ಆಗ ಟೀಕೆಗಳು ವ್ಯಕ್ತವಾಗಿದ್ದವು. ಆದರೆ ಈಗ ಹೊರಬರುತ್ತಿರುವ ಮಾಹಿತಿಗಳನ್ನು ಗಮನಿಸಿದರೆ ಆ ಅನುಮಾನಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ ಎಂದು ಸಿ.ಟಿ. ರವಿ ಅಭಿಪ್ರಾಯಪಟ್ಟಿದ್ದಾರೆ.
ಧರ್ಮಸ್ಥಳದ ವಿರುದ್ಧದ ಆರೋಪಗಳ ತನಿಖೆ ನಡೆಯುವಂತೆ, ಧರ್ಮಸ್ಥಳದ ವಿರುದ್ಧವೇ ಯಾವುದೇ ಸಂಚು ನಡೆದಿದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕು. ಹಿಂದೂ ಧರ್ಮದ ಶ್ರದ್ಧಾಕೇಂದ್ರಗಳು ಹಾಗೂ ಧಾರ್ಮಿಕ ಸಂಸ್ಥೆಗಳ ವಿರುದ್ಧ ಅಪನಂಬಿಕೆ ಸೃಷ್ಟಿಸುವ ದೊಡ್ಡ ಕಾರ್ಯತಂತ್ರದ ಭಾಗ ಇದಾಗಿತ್ತೇ ಎಂಬ ಪ್ರಶ್ನೆಯೂ ಉದ್ಭವಿಸಿದೆ ಎಂದು ಹೇಳಿದ್ದಾರೆ.
ಸುಮಾರು 200 ಕೋಟಿ ರೂಪಾಯಿಗಳ ಷಡ್ಯಂತ್ರದ ಆರೋಪ ಸಾಮಾನ್ಯ ವಿಷಯವಲ್ಲ. ಹಣದ ಮೂಲ, ಹಣದ ಹರಿವು, ಪ್ರಕರಣದಲ್ಲಿ ಹೆಸರು ಕೇಳಿಬರುತ್ತಿರುವವರ ಪಾತ್ರ, ಸಾಮಾಜಿಕ ಜಾಲತಾಣಗಳ ಮೂಲಕ ನಡೆದಿರುವ ಪ್ರಚಾರ ಹಾಗೂ ಇದರ ಹಿಂದಿರುವ ಸಂಪೂರ್ಣ ಜಾಲವನ್ನು ಪತ್ತೆಹಚ್ಚಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಪ್ರಕರಣದ ವ್ಯಾಪ್ತಿ ಕರ್ನಾಟಕವನ್ನು ಮೀರಿ ಇತರ ರಾಜ್ಯಗಳಿಗೂ ವಿಸ್ತರಿಸಿರುವ ಆರೋಪಗಳಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಮಾತ್ರ ತನಿಖೆ ನಡೆಸುವುದು ಸಾಕಾಗುವುದಿಲ್ಲ. ಆದ್ದರಿಂದ ಕೇಂದ್ರ ಮಟ್ಟದ ತನಿಖಾ ಸಂಸ್ಥೆಯಾದ ಸಿಬಿಐ ಮೂಲಕ ಸಮಗ್ರ ತನಿಖೆ ನಡೆಸಿದರೆ ಮಾತ್ರ ಪ್ರಕರಣದ ಹಿಂದಿರುವ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸತ್ಯ ಏನೇ ಇದ್ದರೂ ಅದು ಜನರ ಮುಂದೆ ಬರಬೇಕು. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದ್ದರೆ ಅದರ ಹಿಂದಿರುವವರು ಬಯಲಾಗಬೇಕು. ಆರೋಪಗಳಲ್ಲಿ ಸತ್ಯವಿದ್ದರೆ ಅದು ಕೂಡ ಕಾನೂನಿನ ಮುಂದೆ ಸಾಬೀತಾಗಬೇಕು. ಹೀಗಾಗಿ ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕು ಎಂದು ಸಿ.ಟಿ. ರವಿ ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.



