HomeGadag Newsಅಧಿಕಾರಿಗಳ ಗೈರುಹಾಜರಿಗೆ ಎಐ ಬ್ರೇಕ್..! ‘ಕರ್ತವ್ಯ’ ಆ್ಯಪ್ ಜಾರಿ

ಅಧಿಕಾರಿಗಳ ಗೈರುಹಾಜರಿಗೆ ಎಐ ಬ್ರೇಕ್..! ‘ಕರ್ತವ್ಯ’ ಆ್ಯಪ್ ಜಾರಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಗೈರುಹಾಜರಿ, ಬಯೋಮೆಟ್ರಿಕ್ ದುರ್ಬಳಕೆ ಹಾಗೂ ಸಾರ್ವಜನಿಕರಿಗೆ ಅಧಿಕಾರಿಗಳು ಸಿಗದಿರುವ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಕರ್ತವ್ಯ’ (ಕರ್ನಾಟಕ ಅಡ್ವಾನ್ಸ್ಡ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್-ಕೆಎಎಎಂಎಸ್) ಎಂಬ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಅತ್ಯಾಧುನಿಕ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಇಲಾಖಾ ಕಾರ್ಯದರ್ಶಿಗಳೊಂದಿಗೆ ನಡೆಸಿದ ಮೊದಲ ಸಭೆಯಲ್ಲಿಯೇ ಸರ್ಕಾರಿ ನೌಕರರು ಕಚೇರಿ ವೇಳೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ‘ಕರ್ತವ್ಯ’ ವ್ಯವಸ್ಥೆ ಅನುಷ್ಠಾನಗೊಳ್ಳುತ್ತಿದೆ.

ಈ ಹಿಂದೆ ಜಾರಿಯಲ್ಲಿದ್ದ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಹಾಜರಾತಿ ದಾಖಲಿಸಿ ಕಚೇರಿಯಿಂದ ಹೊರ ಹೋಗುವ ಸಾಧ್ಯತೆ ಇತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ಎಐ ಆಧಾರಿತ ಮುಖ ಗುರುತಿಸುವಿಕೆ ಹಾಗೂ ಜಿಯೋಫೆನ್ಸಿಂಗ್ ತಂತ್ರಜ್ಞಾನದ ಮೂಲಕ ಉದ್ಯೋಗಿ ಕಚೇರಿ ವ್ಯಾಪ್ತಿಯಲ್ಲೇ ಇದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.

‘ಕರ್ತವ್ಯ’ ಸಾಫ್ಟ್‌ವೇರ್‌ನ್ನು ಯಾವುದೇ ಖಾಸಗಿ ಸಂಸ್ಥೆಯ ನೆರವಿಲ್ಲದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಸೆಂಟರ್ ಫಾರ್ ಇ-ಗವರ್ನೆನನ್ಸ್ (ಸಿಇಜಿ) ಹಾಗೂ ಕರ್ನಾಟಕ ಎಐ ಸೆಲ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದರಿಂದ ಸರ್ಕಾರದ ಕೋಟ್ಯಂತರ ರೂಪಾಯಿ ವೆಚ್ಚ ಉಳಿತಾಯವಾಗಿದ್ದು, ದತ್ತಾಂಶ ಸುರಕ್ಷತೆ ಹಾಗೂ ಸ್ವಾಯತ್ತತೆ ಹೆಚ್ಚಿದೆ.

ಅದೇ ರೀತಿ ಪ್ರತಿದಿನ ಆ್ಯಪ್ ಮೂಲಕ ಹಾಜರಾತಿ ದಾಖಲಿಸುವವರ ಸಂಖ್ಯೆ 1.85 ಲಕ್ಷದಿಂದ 2.32 ಲಕ್ಷಕ್ಕೆ ಏರಿಕೆಯಾಗಿದ್ದು, ಸಕ್ರಿಯ ಬಳಕೆಯಲ್ಲಿ ಶೇ.25ರಷ್ಟು ಹೆಚ್ಚಳ ದಾಖಲಾಗಿದೆ.

ಪ್ರಸ್ತುತ 42 ಇಲಾಖೆಗಳ 4.78 ಲಕ್ಷಕ್ಕೂ ಹೆಚ್ಚು ನೌಕರರನ್ನು ಈ ವ್ಯವಸ್ಥೆಗೆ ಒಳಪಡಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ 1.68 ಲಕ್ಷಕ್ಕೂ ಹೆಚ್ಚು ನೌಕರರು ಈಗಾಗಲೇ ನೋಂದಾಯಿಸಿಕೊಂಡಿದ್ದು, ದೈನಂದಿನ ಹಾಜರಾತಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 66 ಸಾವಿರಕ್ಕೂ ಅಧಿಕ ನೋಂದಣಿಯೊಂದಿಗೆ ಎರಡನೇ ಸ್ಥಾನದಲ್ಲಿದೆ.

ಮೊಬೈಲ್ ಆ್ಯಪ್ ಮೂಲಕವೇ ಹಾಜರಾತಿ ದಾಖಲಿಸುವ ವ್ಯವಸ್ಥೆ ಇರುವುದರಿಂದ ಬಯೋಮೆಟ್ರಿಕ್ ಯಂತ್ರಗಳ ಮುಂದೆ ಸಾಲಿನಲ್ಲಿ ನಿಲ್ಲುವ ಅಗತ್ಯ ತಪ್ಪಿದೆ. ಜೊತೆಗೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳು ದಿನನಿತ್ಯ ಈ ವ್ಯವಸ್ಥೆಯ ಡ್ಯಾಶ್‌ಬೋರ್ಡ್‌ನ್ನು ಪರಿಶೀಲಿಸಲಿದ್ದಾರೆ.

ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಪ್ರಕಾರ, ಅಧಿಕಾರಿಗಳ ಲಭ್ಯತೆ ಖಚಿತವಾಗುವುದರಿಂದ ಸಾರ್ವಜನಿಕರಿಗೆ ಸೇವೆಗಳು ವೇಗವಾಗಿ ಹಾಗೂ ಸುಲಭವಾಗಿ ದೊರೆಯಲಿದ್ದು, ಡಿಜಿಟಲ್ ಆಡಳಿತದಲ್ಲಿ ಕರ್ನಾಟಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಒಂದೇ ವಾರದಲ್ಲಿ 25% ಏರಿಕೆ

ಯೋಜನೆಗೆ ಸರ್ಕಾರಿ ನೌಕರರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಕಳೆದ ವಾರ 2.46 ಲಕ್ಷ ಇದ್ದ ನೋಂದಣಿ ಸಂಖ್ಯೆ ಈಗ 3.01 ಲಕ್ಷಕ್ಕೆ ಏರಿಕೆಯಾಗಿದೆ. ಕೇವಲ ಒಂದೇ ವಾರದಲ್ಲಿ 55 ಸಾವಿರಕ್ಕೂ ಅಧಿಕ ನೌಕರರು ಹೊಸದಾಗಿ ನೋಂದಾಯಿಸಿಕೊಂಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!