HomeGadag News‘ಮಿಸ್ಟರ್ ಕ್ಲೀನ್’ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ಗದಗದಲ್ಲಿ ಒಕ್ಕೊರಲ ಬೇಡಿಕೆ

‘ಮಿಸ್ಟರ್ ಕ್ಲೀನ್’ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ಗದಗದಲ್ಲಿ ಒಕ್ಕೊರಲ ಬೇಡಿಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸಚಿವ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹಾಗೂ ಗದಗ ಶಾಸಕ ಡಾ. ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಉಪಮುಖ್ಯಮಂತ್ರಿ ಹುದ್ದೆಗೂ ಪರಿಗಣಿಸಬೇಕು ಎಂಬ ಒತ್ತಾಯ ಗದಗ ಜಿಲ್ಲೆಯಲ್ಲಿ ಮತ್ತಷ್ಟು ತೀವ್ರಗೊಂಡಿದೆ. ವಿವಿಧ ಸಮಾಜಗಳ ಮುಖಂಡರು, ಅಭಿಮಾನಿ ಬಳಗಗಳು ಹಾಗೂ ಸಂಘಟನೆಗಳ ಪ್ರತಿನಿಧಿಗಳು ಸೋಮವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಪ್ರತ್ಯೇಕ ಸುದ್ದಿಗೋಷ್ಠಿಗಳನ್ನು ನಡೆಸಿ ಕಾಂಗ್ರೆಸ್ ವರಿಷ್ಠರಿಗೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಲ್.ಡಿ. ಚಂದಾವರಿ, ಎಚ್.ಕೆ. ಪಾಟೀಲರು ದೂರದೃಷ್ಟಿಯ ನಾಯಕರು. ಜನರ ಒಳಿತಿಗಾಗಿ 24/7 ದುಡಿಯುವ ಅಪರೂಪದ ರಾಜಕಾರಣಿ. ತಮ್ಮ ಅಧಿಕಾರಾವಧಿಯಲ್ಲಿ ಸಮಾಜದ ವಿವಿಧ ಸಮುದಾಯಗಳಿಗೆ ಭವನಗಳು, ಆರೋಗ್ಯ ಸೇವೆಗಳಿಗಾಗಿ ಆಸ್ಪತ್ರೆಗಳು, ಕ್ರೀಡಾ ಚಟುವಟಿಕೆಗಳಿಗೆ ಮೈದಾನಗಳು, ಶುದ್ಧ ಕುಡಿಯುವ ನೀರಿನ ಘಟಕಗಳು, ಕೆರೆ-ಕಟ್ಟೆಗಳ ಅಭಿವೃದ್ಧಿ, ಉದ್ಯಾನವನಗಳ ನಿರ್ಮಾಣ ಹಾಗೂ ಆಶ್ರಯ ಮನೆಗಳ ನಿರ್ಮಾಣದಂತಹ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇಂತಹ ಕಳಂಕರಹಿತ ಹಾಗೂ ಅನುಭವಿ ರಾಜಕಾರಣಿಗೆ ಸಚಿವ ಸ್ಥಾನ ನೀಡುವುದು ಅನಿವಾರ್ಯ ಎಂದು ಒತ್ತಾಯಿಸಿದರು.

ಪಂಚಮಸಾಲಿ ಸಮಾಜದ ಪರವಾಗಿ ಮಾತನಾಡಿದ ಅನಿಲ್‌ಕುಮಾರ ಪಾಟೀಲ, “ಉತ್ತರ ಕರ್ನಾಟಕದ ಹುಲಿ” ಎಂದೇ ಖ್ಯಾತರಾಗಿರುವ ಎಚ್.ಕೆ. ಪಾಟೀಲರು ಯಾವುದೇ ಖಾತೆ ನೀಡಿದರೂ ಅಭಿವೃದ್ಧಿಯ ಛಾಪು ಮೂಡಿಸಿದವರು. ರಾಜ್ಯದ ಅಭಿವೃದ್ಧಿ ಹಾಗೂ ಉತ್ತರ ಕರ್ನಾಟಕದ ಹಿತದೃಷ್ಟಿಯಿಂದ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದರು.

ಗದಗ ಜಿಲ್ಲೆಯ ಸವಿತಾ ಸಮಾಜದ ಹಿರಿಯರು ಹಾಗೂ ಎಚ್.ಕೆ. ಪಾಟೀಲ ಅಭಿಮಾನಿ ಬಳಗದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸವಿತಾ ಸಮಾಜದ ಮುಖಂಡ ದೀಪಕ್ ರಾಯಚೂರು, ಕಳೆದ ನಾಲ್ಕು ದಶಕಗಳಿಂದ ಕಳಂಕರಹಿತ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಎಚ್.ಕೆ. ಪಾಟೀಲರು ಅಧಿಕಾರ ಸಿಕ್ಕಾಗಲೆಲ್ಲ ಪಾರದರ್ಶಕ ಆಡಳಿತ ಹಾಗೂ ಜನಸೇವೆಯ ಮೂಲಕ ಜನಮನ ಗೆದ್ದಿದ್ದಾರೆ. ಇಂತಹ “ಮಿಸ್ಟರ್ ಕ್ಲೀನ್” ನಾಯಕರಿಗೆ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಗದಗ ಜಿಲ್ಲೆ ಮಾತ್ರವಲ್ಲದೆ ಇಡೀ ಉತ್ತರ ಕರ್ನಾಟಕದ ಜನತೆಗೆ ನೋವುಂಟು ಮಾಡಿದೆ ಎಂದು ಹೇಳಿದರು.

ಗದಗ ನಗರದಲ್ಲಿ ಎರಡು ರೂಪಾಯಿಗೆ 20 ಲೀಟರ್ ಶುದ್ಧ ಕುಡಿಯುವ ನೀರು ದೊರೆಯುವಂತೆ ಯೋಜನೆ ರೂಪಿಸಿ ಜಾರಿಗೊಳಿಸಿದ ಭಗೀರಥ ಎಚ್.ಕೆ. ಪಾಟೀಲರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ವೇಳೆ ದೇಶದಲ್ಲೇ ಮಾದರಿಯಾಗುವ ಗ್ರಾಮೀಣ ಅಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ. ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾಗ ಮೋಡ ಬಿತ್ತನೆ ಮೂಲಕ ಕೃತಕ ಮಳೆಯ ಪ್ರಯತ್ನ, ಉತ್ತರ ಕರ್ನಾಟಕದ ಜನರಿಗೆ ನ್ಯಾಯ ದೊರಕುವ ನಿಟ್ಟಿನಲ್ಲಿ ಸಂಚಾರಿ ಪೀಠಗಳ ಸ್ಥಾಪನೆ ಸೇರಿದಂತೆ ಅನೇಕ ದೂರದೃಷ್ಟಿಯ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಶ್ಲಾಘಿಸಿದರು.

ವಯೋವೃದ್ಧರ ಕಣ್ಣಿನ ತಪಾಸಣೆ, ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ, ಕನ್ನಡಕ ವಿತರಣೆ, ಅಂಗವಿಕಲರಿಗೆ ಕೃತಕ ಕಾಲುಗಳ ವಿತರಣೆ, ಹೃದಯ ಹಾಗೂ ಕಿಡ್ನಿ ಸಂಬಂಧಿತ ಗಂಭೀರ ಕಾಯಿಲೆಗಳಿಗೆ ಉಚಿತ ಚಿಕಿತ್ಸೆಯಂತಹ ಮಾನವೀಯ ಕಾರ್ಯಗಳ ಮೂಲಕ ಜನಸೇವೆಯನ್ನು ಜೀವನ ಧ್ಯೇಯವನ್ನಾಗಿಸಿಕೊಂಡಿರುವ ಎಚ್.ಕೆ. ಪಾಟೀಲರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಮೂಲಕ ರಾಜ್ಯಕ್ಕೆ ಅವರ ಅನುಭವದ ಲಾಭ ದೊರಕುವಂತೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸಚಿವ ಸ್ಥಾನ ನೀಡುವ ಬದಲು ಸಭಾಧ್ಯಕ್ಷ ಸ್ಥಾನ ನೀಡಿ ಅವರ ರಾಜಕೀಯ ಸಾಮರ್ಥ್ಯವನ್ನು ಸೀಮಿತಗೊಳಿಸುವ ಪ್ರಯತ್ನ ಮಾಡಬಾರದು. ಅಭಿವೃದ್ಧಿ ಮತ್ತು ಪಾರದರ್ಶಕ ಆಡಳಿತದ ಪ್ರತೀಕವಾಗಿರುವ ಎಚ್.ಕೆ. ಪಾಟೀಲರಿಗೆ ಸರ್ಕಾರದಲ್ಲಿ ಪ್ರಮುಖ ಜವಾಬ್ದಾರಿ ನೀಡಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಜು ಗೌಡರ, ವೆಂಕಟೇಶ್ ರಾಂಪುರ, ಗಂಗಣ್ಣ ಗೌಡರ್, ಪಾಂಡಪ್ಪ ರಾಂಪುರ, ಪರಶುರಾಮ್ ಕೋಟೆಕಲ್, ಪಂಪಣ್ಣ ರಾಯಚೂರು, ಮಂಜುನಾಥ್ ಬಯಲಗುಡ್ಡ, ವೆಂಕಟೇಶ್ ಬಯಲಗುಡ್ಡ, ಮುರಳಿ ವಲ್ಲೂರ್, ರವಿಕುಮಾರ ಹಡಪದ್, ರಾಘವೇಂದ್ರ ರಾಂಪುರ, ರಾಘವೇಂದ್ರ ಬಯಲಗುಡ್ಡ, ಶ್ರೀನಿವಾಸ್ ರಾಂಪುರ, ಜಗದೀಶ್ ರಾಂಪುರ, ಪರಶುರಾಮ್ ಆದೋನಿ, ಮಂಜುನಾಥ್ ಕಡಬುರ್ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

“ಜನಸೇವೆ, ಪಾರದರ್ಶಕ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳ ಮೂಲಕ ನಾಲ್ಕು ದಶಕಗಳಿಂದ ಜನರ ವಿಶ್ವಾಸ ಗಳಿಸಿರುವ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ಮಾತ್ರವಲ್ಲ, ಉಪಮುಖ್ಯಮಂತ್ರಿ ಹುದ್ದೆಯನ್ನೂ ನೀಡಬೇಕು.”

 ದೀಪಕ್ ರಾಯಚೂರು

ಜಿಲ್ಲಾ ಸವಿತಾ ಸಮಾಜದ ಮುಖಂಡ

“ಯಾವ ಖಾತೆ ಕೊಟ್ಟರೂ ಅಭಿವೃದ್ಧಿಯ ಛಾಪು ಮೂಡಿಸುವ ಸಾಮರ್ಥ್ಯ ಎಚ್.ಕೆ. ಪಾಟೀಲರದ್ದು. ಉತ್ತರ ಕರ್ನಾಟಕದ ಧ್ವನಿಯಾಗಿರುವ ಅವರಿಗೆ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ಸಿಗಲೇಬೇಕು.”

ಅನಿಲ್‌ಕುಮಾರ ಪಾಟೀಲ

ಪಂಚಮಸಾಲಿ ಸಮಾಜ ಮುಖಂಡ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!