ಬೆಂಗಳೂರು: ಬೈಕ್ ಖರೀದಿಸುವ ನೆಪದಲ್ಲಿ ಶೋರೂಂಗಳಿಗೆ ತೆರಳಿ ಟೆಸ್ಟ್ ಡ್ರೈವ್ ಕೇಳಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಖದೀಮರನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮೊಹಮ್ಮದ್ ಉಮರ್ ಸಾಧಿಕ್ ಹಾಗೂ ಸೈಯದ್ ಉಮರ್ ಎಂದು ಗುರುತಿಸಲಾಗಿದೆ. ಆರೋಪಿಗಳು ಬೈಕ್ ಖರೀದಿಸುವುದಾಗಿ ನಂಬಿಸಿ ಶೋರೂಂಗಳಿಗೆ ತೆರಳಿ ಟೆಸ್ಟ್ ಡ್ರೈವ್‌ಗೆ ವಾಹನ ಪಡೆದುಕೊಳ್ಳುತ್ತಿದ್ದರು.
ತಮ್ಮೊಂದಿಗೆ ಅರ್ಧ ಲೀಟರ್ ಪೆಟ್ರೋಲ್ ಕೂಡ ತೆಗೆದುಕೊಂಡು ಹೋಗುತ್ತಿದ್ದ ಅವರು, ಸ್ವಲ್ಪ ದೂರ ಸಾಗಿದ ಬಳಿಕ ವಾಹನಕ್ಕೆ ಪೆಟ್ರೋಲ್ ತುಂಬಿಸಿ ಸ್ಥಳದಿಂದ ಪರಾರಿಯಾಗುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇದರ ಜೊತೆಗೆ, ಹ್ಯಾಂಡ್ ಲಾಕ್ ಮುರಿದು ಬೈಕ್ ಕಳವು ಮಾಡುವ ಪ್ರಕರಣಗಳಲ್ಲಿಯೂ ಆರೋಪಿಗಳ ಪಾತ್ರವಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ ಒಟ್ಟು ₹15 ಲಕ್ಷ ಮೌಲ್ಯದ 23 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.



