ಬೆಂಗಳೂರು: ಫೇಸ್‌ಬುಕ್ ಮತ್ತು ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ನೀಡಿ ಕಳವು ಮಾಡಿದ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸಲ್ಮಾನ್ ಮೆಹಬೂಬ್ @ ಬಿಲಾಲ್ ಎಂದು ಗುರುತಿಸಲಾಗಿದೆ. ಆರೋಪಿ ನಗರದ ವಿವಿಧ ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡಿದ್ದ ಬೈಕ್‌ಗಳನ್ನು ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದ ಎನ್ನಲಾಗಿದೆ.
ಕಳವು ಮಾಡಿದ ಬೈಕ್‌ಗಳ ಮೂಲ ಗುರುತು ಸಿಗದಂತೆ ಅವುಗಳ ನಂಬರ್ ಪ್ಲೇಟ್ ಬದಲಾಯಿಸಿ, ಬಳಿಕ ಫೇಸ್‌ಬುಕ್ ಹಾಗೂ ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ನೀಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದನು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಆತನಿಂದ ₹22 ಲಕ್ಷ ಮೌಲ್ಯದ 37 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಯ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಒಂದು ಬೈಕ್ ಕಳವು ಪ್ರಕರಣವೂ ಪತ್ತೆಯಾಗಿದೆ. ಪ್ರಕರಣ ಸಂಬಂಧ ಜಯನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



