ವಿಜಯಸಾಕ್ಷಿ ಸುದ್ದಿ, ಗದಗ: ಸ್ವಚ್ಛತೆ ದೇವರಿಗೆ ಸಮಾನವಾಗಿದ್ದು, ನಮ್ಮ ದೇಹದಂತೆ ಸುತ್ತಮುತ್ತಲಿನ ಪರಿಸರವನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛ ವಾತಾವರಣದಿಂದ ಅನಾರೋಗ್ಯವನ್ನು ದೂರವಿಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ನಗರಸಭೆ ಗದಗ-ಬೆಟಗೇರಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಕೆಲಸಗಾರರಿಗೆ ಘನ ತ್ಯಾಜ್ಯ ನಿರ್ವಹಣೆ ಹಾಗೂ ಸುರಕ್ಷತಾ ಪರಿಕರಗಳ ಬಳಕೆ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತ್ಯಾಜ್ಯವನ್ನು ಹಸಿಕಸ, ಒಣಕಸ, ಸ್ಯಾನಿಟರಿ ತ್ಯಾಜ್ಯ ಹಾಗೂ ವಿಶೇಷ ಕಾಳಜಿ ತ್ಯಾಜ್ಯ ಎಂದು ಮೂಲದಲ್ಲಿಯೇ ವಿಂಗಡಿಸುವುದರಿಂದ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತದೆ. ನಗರಗಳ ಬೆಳವಣಿಗೆಯೊಂದಿಗೆ ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿರುವುದರಿಂದ ವೈಜ್ಞಾನಿಕ ನಿರ್ವಹಣೆ ಅಗತ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ದಿವಾಣಿ ನ್ಯಾಯಾಧೀಶ ಸಿ.ಎಸ್. ಶಿವನಗೌಡ್ರ ಮಾತನಾಡಿ, 2013ರ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ನಿಷೇಧ ಮತ್ತು ಪುನರ್ವಸತಿ ಕಾಯ್ದೆಯಡಿ ಪೌರಕಾರ್ಮಿಕರ ಹಕ್ಕುಗಳಿಗೆ ವಿಶೇಷ ರಕ್ಷಣೆ ಕಲ್ಪಿಸಲಾಗಿದೆ. ಪೌರಕಾರ್ಮಿಕರಿಗೆ ಉಚಿತ ಕಾನೂನು ನೆರವು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪ್ರಾಧಿಕಾರ ಒದಗಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ, ಸಫಾಯಿ ಕರ್ಮಚಾರಿ ಸಂಘದ ನಾಮನಿರ್ದೇಶಿತ ಸದಸ್ಯರಾದ ಎಸ್.ಎನ್. ಬಳ್ಳಾರಿ ಹಾಗೂ ಮುತ್ತು ಬಿಳೆಯಲಿ ಮಾತನಾಡಿ, ಪೌರಕಾರ್ಮಿಕರ ಆರೋಗ್ಯ, ಸುರಕ್ಷತೆ ಮತ್ತು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
“ಸ್ವಚ್ಛತೆ ಕೇವಲ ಪೌರಕಾರ್ಮಿಕರ ಜವಾಬ್ದಾರಿ ಅಲ್ಲ. ಪ್ರತಿಯೊಬ್ಬ ನಾಗರಿಕನೂ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು.”
ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ



