ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮದ ಹೆಸರಿನಲ್ಲಿ ಕನ್ನಡ ಮಾಧ್ಯಮದಲ್ಲಿ ಉತ್ತರಿಸುವ ವಿದ್ಯಾರ್ಥಿಗಳಿಗೆ ‘ಬಿ ಶ್ರೇಣಿ’ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಉತ್ತರಿಸುವವರಿಗೆ ಮಾತ್ರ ‘ಎ ಶ್ರೇಣಿ’ ನೀಡುತ್ತಿರುವ ಕ್ರಮವನ್ನು ಎಐಡಿಎಸ್ಓ (ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ) ತೀವ್ರವಾಗಿ ಖಂಡಿಸಿದೆ.
ಸೇತುಬಂಧ ಪರೀಕ್ಷೆಗಳ ಮೌಲ್ಯಮಾಪನದಲ್ಲಿ ಈ ಮಾನದಂಡವನ್ನು ಅನುಸರಿಸುತ್ತಿರುವುದು ಭಾಷಾ ಆಯ್ಕೆಯ ಸ್ವಾತಂತ್ರ್ಯದ ಉಲ್ಲಂಘನೆಯಾಗಿದ್ದು, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ವಿರುದ್ಧ ತಾರತಮ್ಯ ಎಸಗಿದಂತಾಗಿದೆ ಎಂದು ಸಂಘಟನೆ ಆರೋಪಿಸಿದೆ.
ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಗೆ ಉತ್ತೇಜನ ನೀಡಬೇಕೆಂದು ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನಗಳಿಗೂ ಈ ಕ್ರಮ ವಿರುದ್ಧವಾಗಿದೆ. ಪ್ರಾಥಮಿಕ ಹಂತದಲ್ಲಿ ಮಾತೃಭಾಷಾ ಶಿಕ್ಷಣವನ್ನು ಬಲಪಡಿಸುವ ಬದಲು ಕನ್ನಡಕ್ಕೆ ಎರಡನೇ ಸ್ಥಾನ ನೀಡುವ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರೊಂದಿಗೆ ಸಮಾಲೋಚನೆ ನಡೆಸದೆ ದ್ವಿಭಾಷಾ ಮಾಧ್ಯಮವನ್ನು ಜಾರಿಗೊಳಿಸಿರುವುದೇ ಇಂತಹ ಸಮಸ್ಯೆಗಳಿಗೆ ಕಾರಣವಾಗಿದೆ. ಮಾತೃಭಾಷಾ ಶಿಕ್ಷಣವು ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಗೆ ಮೂಲಾಧಾರವಾಗಿದ್ದು, ಶಿಕ್ಷಣ ತಜ್ಞರ ಅಭಿಪ್ರಾಯಗಳನ್ನು ಕಡೆಗಣಿಸಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಎಐಡಿಎಸ್ಓ ಆರೋಪಿಸಿದೆ.
ಕನ್ನಡ ಮಾಧ್ಯಮದ ಆಯ್ಕೆ ಸ್ವಾತಂತ್ರ್ಯವನ್ನು ರಕ್ಷಿಸಿ ಉತ್ತೇಜನ ನೀಡಬೇಕು ಹಾಗೂ ಈ ಅವೈಜ್ಞಾನಿಕ ಮತ್ತು ಅಪ್ರಜಾತಾಂತ್ರಿಕ ಕ್ರಮವನ್ನು ಕೂಡಲೇ ಕೈಬಿಡಬೇಕು ಎಂದು ಎಐಡಿಎಸ್ಓ ಜಿಲ್ಲಾ ಸಂಚಾಲಕಿ ಎಂ. ಶಾಂತಿ ಆಗ್ರಹಿಸಿದ್ದಾರೆ.
“ಕನ್ನಡದಲ್ಲಿ ಉತ್ತರ ಬರೆದ ವಿದ್ಯಾರ್ಥಿಗಳಿಗೆ ಕಡಿಮೆ ಶ್ರೇಣಿ ನೀಡುವುದು ಭಾಷಾ ತಾರತಮ್ಯವಾಗಿದೆ. ಸರ್ಕಾರ ಕೂಡಲೇ ಈ ಕ್ರಮವನ್ನು ಹಿಂಪಡೆದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಬೇಕು.”
ಎಂ. ಶಾಂತಿ, ಜಿಲ್ಲಾ ಸಂಚಾಲಕಿ, ಎಐಡಿಎಸ್ಓ ಗದಗ



