ಬೆಂಗಳೂರು: ಲಿವ್-ಇನ್ ಸಂಬಂಧದ ಜಗಳ ದುರಂತ ಅಂತ್ಯ ಕಂಡ ಘಟನೆ ಮಲ್ಲೇಶ್ವರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಶನಿವಾರ ರಾತ್ರಿ ನಡೆದ ಈ ಘಟನೆಯಲ್ಲಿ 20 ವರ್ಷದ ಅನುಷಾ ಮೃತಪಟ್ಟಿದ್ದು, ಆಕೆಯ ಲಿವ್-ಇನ್ ಸಂಗಾತಿ ಶರತ್ (25) ಬಂಧಿತನಾಗಿದ್ದಾನೆ.
ಮೂಲಗಳ ಪ್ರಕಾರ, ಅನುಷಾ ಮತ್ತು ಶರತ್ ಹಾಸನ ಮೂಲದವರು ಆಗಿದ್ದು, ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದರು. ನಂತರ ಇಬ್ಬರೂ ಬೆಂಗಳೂರಿಗೆ ಬಂದು ಕಳೆದ ಆರು ತಿಂಗಳಿನಿಂದ ಮಲ್ಲೇಶ್ವರದ ಮನೆಯಲ್ಲಿ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು.
ಘಟನೆಯ ದಿನ ವೈಯಕ್ತಿಕ ವಿಚಾರಕ್ಕೆ ಇಬ್ಬರ ನಡುವೆ ತೀವ್ರ ಜಗಳ ನಡೆದಿದೆ. ಈ ವೇಳೆ ಶರತ್ ಅನುಷಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ನಂತರ ಆರೋಪಿ ಈ ವಿಷಯವನ್ನು ತನ್ನ ವಕೀಲರಿಗೆ ತಿಳಿಸಿದ್ದಾನೆ. ವಕೀಲರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಶೇಷಾದ್ರಿಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಂತರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶರತ್‌ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.



